ಬೆಂಗಳೂರು: ಉದ್ಯೋಗಿ ಮತ್ತು ಕಂಪನಿ ನಡುವಿನ ವಿವಾದ ನ್ಯಾಯಾಧಿಕರಣದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಜಾಗೊಳಿಸಿರುವ ನೌಕರನಿಗೆ ಉದ್ಯೋಗ ಮತ್ತು ಬಾಕಿ ವೇತನ ನೀಡುವಂತೆ ಕಾರ್ಮಿಕ ನ್ಯಾಯಾಲಯ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ಮಲ್ಬರಿ ಸಿಲ್ಕ್ಸ್ ಹೆಸರಿನ ಬಟ್ಟೆ ತಯಾರಿಕಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಮಲ್ಬರಿ ಸಿಲ್ಕ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ತನ್ನ ಉದ್ಯೋಗಿಗಳಾದ ಎನ್.ಜಿ. ಚೌಡಪ್ಪ ಹಾಗೂ ಇತರೆ ಮೂವರನ್ನು ಸೇವೆಯಲ್ಲಿ ದುಷ್ಕೃತ್ಯ ನಡೆಸಿದ ಆರೋಪದಡಿ ಕೆಲಸದಿಂದ ತೆಗೆದುಹಾಕಿತ್ತು. ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಚೌಡಪ್ಪ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಇತರೆ ಮೂವರು ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಸಂಸ್ಥೆ ಚೌಡಪ್ಪರನ್ನು ವಜಾಗೊಳಿಸಿತ್ತು. ಈ ಆದೇಶವನ್ನು ರದ್ದುಪಡಿಸಿದ್ದ ಕಾರ್ಮಿಕ ನ್ಯಾಯಾಲಯ ವಜಾಗೊಳಿಸಿರುವ ಉದ್ಯೋಗಿಯನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವಂತೆ ಹಾಗೂ ಹಿಂಬಾಕಿ ವೇತನ ಪಾವತಿಸುವಂತೆ ನಿರ್ದೇಶಿಸಿತ್ತು.
ಹೈಕೋರ್ಟ್ ತೀರ್ಪು: ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿ ಆದೇಶ ರದ್ದುಪಡಿಸುವಂತೆ ಕೋರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಚೌಡಪ್ಪರನ್ನು ವಜಾಗೊಳಿಸಿರುವುದು ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 33(2) ಬಿ ಅಡಿಯಲ್ಲಿ ಸರಿಯಲ್ಲ. ಹೀಗಾಗಿ ಕಾರ್ಮಿಕ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
WRIT PETITION NO. 28177 OF 2009 (L-TER)