ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ನಗರದ ಬ್ಯಾಟರಾಯನಪುರ ನಿವಾಸಿಯಾದ 38 ವರ್ಷದ ಕೃಷ್ಣಪ್ಪ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತನ ಅಪರಾಧ ಕತ್ಯ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಎಫ್.ಟಿ.ಎಸ್.ಸಿ 1ನೇ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್ ರೂಪ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪೋಕ್ಸೋ ಕಾಯ್ದೆಯ ಕಲಂ 8 ರ ಅಡಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ಮತ್ತು ಐಪಿಸಿ ಸೆಕ್ಷನ್ 506 ರ ಅಡಿ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದ್ದಾರೆ.
ಸಂತ್ರಸ್ತೆಗೆ 1 ಲಕ್ಷ ರೂ ಪರಿಹಾರ: ಪ್ರಕರಣದ ಸಂತ್ರಸ್ತ ಬಾಲಕಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಬಾಲಕಿಯ ಅಮ್ಮ ಮತ್ತು ಅಜ್ಜಿ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಯ ಬೀಗದ ಕೀ ಯನ್ನು ನೆರೆ ಮನೆಯ ಆರೋಪಿಯ ಕೈಗೆ ಕೊಟ್ಟು ಹೋಗುತ್ತಿದ್ದರು. ಮಕ್ಕಳು ಶಾಲೆಯಿಂದ ವಾಪಸ್ಸು ಬಂದಾಗ ಅವರಿಗೆ ಸುಲಭವಾಗಿ ಕೀ ಸಿಗಲೆಂದು ಹೀಗೆ ಕೊಟ್ಟು ಹೋಗುತ್ತಿದ್ದರು. ಅದರಂತೆ ಸಂತ್ರಸ್ತ ಬಾಲಕಿ ಕೀ ತೆಗೆದುಕೊಳ್ಳಲು ಆರೋಪಿ ಮನೆಗೆ ಹೋಗುತ್ತಿದ್ದಳು.
ಮನೆಯ ಬೀಗದ ಕೀ ಪಡೆದುಕೊಳ್ಳಲು ಹೋಗುತ್ತಿದ್ದ ಸಂತ್ರಸ್ತ ಬಾಲಕಿಗೆ ಚಾಕೋಲೇಟ್ ಹಾಗೂ ತಿಂಡಿ ನೀಡಿ ಆಕೆಯೊಂದಿಗೆ ಸ್ನೇಹ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಘಟನೆ ಪೋಷಕರ ಗಮನಕ್ಕೆ ಬಂದ ನಂತರ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಬ್ಯಾಟರಾಯನಪುರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ವಿಚಾರಣೆ ವೇಳೆ 15 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿದೆ.