ಪೊಲೀಸರಿಗೆ ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸದಂತೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳು ಹಲವು ಬಾರಿ ನಿರ್ದೇಶಿಸಿವೆ. ಹೀಗಿದ್ದೂ ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶಿಸಿದ ಆರೋಪದಡಿ ಬೆಂಗಳೂರಿನ ಇನ್ಸಪೆಕ್ಟರ್ ವಿರುದ್ಧ ದೂರು ಸಲ್ಲಿಸಲಾಗಿದೆ.
ಆಸ್ತಿ ಒಡೆತನಕ್ಕೆ ಸಂಬಂಧಿಸಿದ ಸಿವಿಲ್ ವ್ಯಾಜ್ಯದಲ್ಲಿ ಬನಶಂಕರಿ ಇನ್ಸಪೆಕ್ಟರ್ ಗಿರೀಶ್ ಮೂಗು ತೂರಿಸಿ ವಿರೋಧಿಗಳ ಜೊತೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡಬೇಕು ಹಾಗೂ ಪಿಐ ಗಿರೀಶ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಬನಶಂಕರಿ ನಿವಾಸಿ ಧನಂಜಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಡಿಸಿಪಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ದೂರುದಾರರ ಆರೋಪವೇನು: ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿ ಧನಂಜಯ ಅವರ ಸೋದರ ಜಯಪಾಲ್ ಎಂಬುವರಿಗೆ ಸೇರಿದ 65*41 ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ಮನೆ ಇದ್ದು, ಜಯಪಾಲ್ ಮಕ್ಕಳಿಲ್ಲದೇ ಮೃತಪಟ್ಟಿದ್ದಾರೆ. ಜಯಪಾಲ್ ಅವರ ಸಾವಿಗೆ ಮುನ್ನ ಈ ಆಸ್ತಿಯನ್ನು ಅದೇ ಮನೆಯಲ್ಲಿ ಬಾಡಿಗೆದಾರರಾಗಿದ್ದ ನಿವೇದಿತಾ ಎಂಬುವರ ಹೆಸರಿಗೆ ವಿಲ್ ಮಾಡಿದ್ದಾರೆ ಎನ್ನಲಾಗಿದೆ.
ಜಯಪಾಲ್ ಮಕ್ಕಳಿಲ್ಲದೆ ಮೃತಪಟ್ಟಿದ್ದು, ವಾರಸುದಾರರಿಲ್ಲದ ಅಣ್ಣನ ಆಸ್ತಿ ತಮಗೆ ಸೇರಬೇಕೆಂದು ಧನಂಜಯ ಅವರು ನಿವೇದಿತಾ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ ಬನಶಂಕರಿ ಇನ್ಸಪೆಕ್ಟರ್ ಗಿರೀಶ್, ನಿವೇದಿತಾ ಪರ ವಹಿಸಿದ್ದು, ತಮಗೆ ಮನೆ ಬಿಟ್ಟುಬಿಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಧನಂಜಯ ಆರೋಪಿಸಿದ್ದಾರೆ.
ಇದೇ ಡಿಸೆಂಬರ್ 17 ರಂದು ಮನೆ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಿವೇದಿತಾ ಹಾಗೂ ಧನಂಜಯ ಅವರು ಮನೆ ನೋಡಿಕೊಳ್ಳಲು ಇರಿಸಿದ್ದ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಉಭಯ ವಾಜ್ಯಗಾರರು ಪರಸ್ಪರ ದೂರು ನೀಡಿದ್ದರೂ ಪಿಐ ಗಿರೀಶ್ ನಾಯಕ್ ಎಫ್ಐಆರ್ ದಾಖಲಿಸಿಲ್ಲ. ಬದಲಿಗೆ ಧನಂಜಯ ಅವರು ಮನೆ ನೋಡಿಕೊಳ್ಳಲು ಇರಿಸಿದ್ದ ಮಹಿಳೆ ಮತ್ತು ಅವರ ಪುತ್ರನನ್ನು ಮನೆಯಿಂದ ಖಾಲಿ ಮಾಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಧನಂಜಯ ನಗರ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ನನ್ನ ಸಹೋದರನ ಮನೆಗೆ ನಿವೇದಿತಾ ಬಾಡಿಗೆಗೆ ಬಂದಿದ್ದರು. ಅವರ ಸಾವಿನ ಬಳಿಕ ಆಸ್ತಿಯನ್ನು ನನ್ನ ಹೆಸರಿಗೆ ವಿಲ್ ಮಾಡಿದ್ದಾರೆ ಎಂದು ಹೇಳುತ್ತಿದ್ದು, ಆಸ್ತಿ ತನಗೇ ಸೇರಬೇಕು ಎನ್ನುತ್ತಿದ್ದಾರೆ. ಈ ನಡುವೆ ಪಿಐ ಗಿರೀಶ್ ನಾಯಕ್ ಆಸ್ತಿಯನ್ನು ಕಬಳಿಸಲು ಒಳಸಂಚು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಧನಂಜಯ ದೂರಿನಲ್ಲಿ ವಿವರಿಸಿದ್ದಾರೆ.
ಅಲ್ಲದೇ, ಅಣ್ಣ ಜಯಪಾಲ್ ಮೃತಪಟ್ಟ ವೇಳೆ ಅವರ ಮೃತದೇಹವನ್ನು ಸ್ವಗ್ರಾಮ ಸಕಲೇಶಪುರಕ್ಕೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ನೆರವೇರಿಸಬೇಕಿತ್ತು. ಆದರೆ, ಇದಕ್ಕೆ ಅವಕಾಶ ನೀಡದೆ ತಾವು ಬೆಂಗಳೂರಿಗೆ ಬರುವ ಮುನ್ನವೇ ವಿಧಿವಿಧಾನಗಳನ್ನು ಗಾಳಿಗೆ ತೂರಿ ಅವರ ಅಂತಿಮ ಸಂಸ್ಕಾರ ಮುಗಿಸಿದ್ದರು. ಮುಖ್ಯವಾಗಿ ಜಯಪಾಲ್ ಸಾವಿನ ಕುರಿತು ಹಲವು ಅನುಮಾನಗಳಿದ್ದು, ಈ ಸಂಬಂಧ ನಿವೇದಿತಾ ವಿರುದ್ಧ ದೂರು ಸಲ್ಲಿಸಿದ್ದೆವು. ಆದರೆ, ಬನಶಂಕರಿ ಪಿಐ ಈ ನಿಟ್ಟಿನಲ್ಲಿ ನಿವೇದಿತಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಿಗೆ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಧನಂಜಯ ಆರೋಪಿಸಿದ್ದಾರೆ.
ದೂರುದಾರನ ವಿರುದ್ಧವೇ ಎಫ್ಐಆರ್: ಪಿಐ ಗಿರೀಶ್ ನಾಯಕ್ ಅವರು ನಿವೇದಿತಾ ಪರ ವಹಿಸದಂತೆ, ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶಿಸದಂತೆ ಸೂಚಿಸಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಧನಂಜಯ ಅವರು ಪೊಲೀಸ್ ಆಯುಕ್ತರಿಗೆ ಡಿ.19ರಂದು ದೂರು ಸಲ್ಲಿಸಿದ ಬಳಿಕ ಡಿ.20ರಂದು ದೂರುದಾರನ ವಿರುದ್ಧವೇ ಎಫ್ಐಆರ್ ದಾಖಲಿಸಲಾಗಿದೆ. ಡಿ.17ರಂದು ನಿವೇದಿತಾ ಹಾಗೂ ಧನಂಜಯ್ ಮನೆ ನೋಡಿಕೊಳ್ಳಲು ನೇಮಿಸಿದ್ದ ವ್ಯಕ್ತಿಗಳ ನಡುವೆ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಪಿಐ ಗಿರೀಶ್ ನಾಯಕ್ ಧನಂಜಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಧನಂಜಯ ಅವರು ಪಿಐ ಗಿರೀಶ್ ನಾಯಕ್ ದಬ್ಬಾಳಿಕೆ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಮತ್ತೊಮ್ಮೆ ದೂರು ನೀಡುತ್ತೇನೆ ಎಂದಿದ್ದಾರೆ.