News

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಗೊತ್ತಿರದಿದ್ದರೆ ಮನೆ ಮಾಲಿಕ ಜವಾಬ್ದಾರನಲ್ಲ

Share It

ಬಾಡಿಗೆಗೆ ಕೊಟ್ಟಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಮನೆಯ ಮಾಲಿಕನಿಗೆ ಗೊತ್ತಿಲ್ಲದಿದ್ದರೆ ಆತನ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆ-1956ರ ಸೆಕ್ಷನ್ 3 ರ ಅಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ತಮ್ಮ ವಿರುದ್ಧ ಚಂದ್ರಲೇಔಟ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ 66 ವರ್ಷದ ನಿವಾಸಿ ಪ್ರಭುರಾಜ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಮಾನವ ಕಳ್ಳಸಾಗಣೆ ತಡೆ ಕಾಯ್ದೆಯ ಸೆಕ್ಷನ್ 3(2)(ಬಿ) ಅನುಸಾರ ಮನೆ ಅಥವಾ ಜಾಗದ ಮಾಲಿಕನಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾಹಿತಿ ಇದ್ದಾಗ ಮಾತ್ರ ಆತನ ವಿರುದ್ಧ ಪ್ರಕರಣ ದಾಖಲಿಸಬಹುದು. ಈ ಪ್ರಕರಣದಲ್ಲಿ ಅರ್ಜಿದಾರರಿಗೆ ತಮ್ಮ ಒಡೆತನದ ಜಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಇಲ್ಲ. ದೋಷಾರೋಪಣೆಯಲ್ಲೂ ಪೊಲೀಸರು ಈ ಅಂಶ ಉಲ್ಲೇಖಿಸಿದ್ದಾರೆ. ಹೀಗಾಗಿ, ಅರ್ಜಿದಾರರ ವಿರುದ್ಧ ಕ್ರಮ ಜರುಗಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿರುವ ಪೀಠ, ಹೈಕೋರ್ಟ್ ನ ಈ ತೀರ್ಪು ಪ್ರಕರಣದ ಇತರೆ ಆರೋಪಿಗಳ ವಿರುದ್ಧದ ವಿಚಾರಣೆಯ ಮೇಲೆ ಯಾವುದೇ ಪ್ರಭಾವ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಿನ್ನೆಲೆ: ಅರ್ಜಿದಾರರಾದ ಪ್ರಭುರಾಜ್ ನಾಗರಭಾವಿಯ ತಮ್ಮ ಮನೆಯನ್ನು 2019ರ ಡಿಸೆಂಬರ್‌ 11ರಂದು ವ್ಯಕ್ತಿಯೊಬ್ಬರಿಗೆ (ಪ್ರಕರಣದ ಮೊದಲ ಆರೋಪಿ) ಬಾಡಿಗೆಗೆ ನೀಡಿದ್ದರು. 2020ರ ಜನವರಿ 25ರಂದು ಚಂದ್ರಲೇಔಟ್ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿ, ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತಂತೆ ಎಫ್ಐಆರ್ ದಾಖಲಿಸಿದ್ದರು. ಈ ವೇಳೆ ಮನೆ ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಜತೆ ಮನೆ ಮಾಲೀಕರ ವಿರುದ್ಧವೂ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆಯ ಸೆಕ್ಷನ್ 3, 4, 5, 6 ಹಾಗೂ ಐಪಿಸಿ 370 ಅಡಿ ಅಡಿ ಎಫ್‌ಐಆರ್ ದಾಖಲಿಸಿದ್ದರು.

ತನಿಖೆ ವೇಳೆ ಮನೆ ಮಾಲಿಕರು, ಬಾಡಿಗೆದಾರ ವ್ಯಕ್ತಿ ವೇಶ್ಯವಾಟಿಕೆ ನಡೆಸುತ್ತಿದ್ದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆ ನಂತರವೂ ಪೊಲೀಸರು ದೋಷಾರೋಪಣೆಯಲ್ಲಿ ಮನೆ ಮಾಲಿಕರನ್ನೂ ಆರೋಪಿಯಾಗಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಭುರಾಜ್ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

(CRL.P 415/2022)


Share It

You cannot copy content of this page