2016 ರಲ್ಲಿ 1 ಸಾವಿರ ರೂ ಮತ್ತು 500 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ಅಬ್ದುಲ್ ನಜೀರ್, ನ್ಯಾ, ಬಿ.ಆರ್ ಗವಾಯಿ, ನ್ಯಾ. ಎ.ಎಸ್ ಬೋಪಣ್ಣ, ನ್ಯಾ. ವಿ ರಾಮಸುಬ್ರಮಣಿಯಂ ಹಾಗೂ ನ್ಯಾ. ಬಿ.ವಿ ನಾಗರತ್ನ ಅವರಿದ್ದ ಸಾಂವಿಧಾನಿಕ ಪೀಠ 4:1 ಅನುಪಾತದಲ್ಲಿ ಕೇಂದ್ರದ ಕ್ರಮವನ್ನು ಸರಿ ಎಂದು ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಆರ್.ಬಿ.ಐ ಮತ್ತು ಕೇಂದ್ರ ಸರ್ಕಾರದ ನಡುವೆ ಸಾಕಷ್ಟು ಚರ್ಚೆ ನಡೆದಿದೆ. 6 ತಿಂಗಳ ಅವಧಿಯ ಸಮಾಲೋಚನೆ ನಂತರ ಅಂತಹ ನಿರ್ಣಯ ಕೈಗೊಳ್ಳಲಾಗಿದೆ. ನೋಟು ಅಮಾನ್ಯಗೊಳಿಸಲು ಆರ್.ಬಿ.ಐಗೆ ಯಾವುದೇ ಸ್ವತಂತ್ರ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಆರ್ಥಿಕ ಕ್ರಮಗಳ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಾಗ ನಿಯಂತ್ರಣವಿರಬೇಕು. ಅಂತಹ ಕ್ರಮಗಳ ಹಿಂದಿನ ನಿರ್ಧಾರವನ್ನು ನಾವು ನ್ಯಾಯಿಕ ದೃಷ್ಟಿಯಿಂದ ನೋಡಲಾಗದು. ಇನ್ನು ನೋಟುಗಳ ವಿನಿಮಯದ ಅವಧಿಯನ್ನು ಕೂಡ ಅಸಮಂಜಸ ಎನ್ನಲಾಗದು ಎಂದು ಸುಪ್ರೀಂ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರದ ಕ್ರಮ ಕಾನೂನು ಬಾಹಿರ: ನೋಟು ಅಮಾನ್ಯೀಕರಣ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿರುವ ನ್ಯಾ. ಬಿ.ವಿ ನಾಗರತ್ನ ಅವರು, ಕೇಂದ್ರದ ನೋಟ್ ಬ್ಯಾನ್ ಕ್ರಮ ಕಾನೂನು ಬಾಹಿರ. ನೋಟು ಅಮಾನ್ಯೀಕರಣದ ಪ್ರಸ್ತಾವನೆ ಕಳುಹಿಸಿದಾಗ ಆರ್.ಬಿ.ಐ ವಿವೇಚನೆ ಬಳಸಿಲ್ಲ, ಸ್ವತಂತ್ರ ನಿರ್ಧಾರ ಕೈಗೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ, ಕರೆನ್ಸಿ ರದ್ದುಗೊಳಿಸುವ ಮುನ್ನ ಸಾಮಾಜಿಕ-ಆರ್ಥಿಕ ಪರಿಣಾಮಗಳ ಬಗ್ಗೆ ಆರ್.ಬಿ.ಐ ಯೋಚಿಸಿತ್ತೇ ಎಂಬುದು ಅಚ್ಚರಿ ಮೂಡಿಸುತ್ತದೆ. ಕೇಂದ್ರದ ಈ ನಿರ್ಣಯ ದೇಶದ ನಾಗರಿಕರ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದೆ. ಹೀಗಾಗಿ, ಕೇಂದ್ರವು ವಿಶಾಲವಾದ ಅಧಿಕಾರ ಹೊಂದಿದ್ದರೂ ಇಂತಹ ನಿರ್ಣಯವನ್ನು ಪೂರ್ಣ ಕಾಯ್ದೆಯ ಮೂಲಕ ತರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.