News ⓇJudgements

ಬಂಧಿತನ ವಕೀಲರು ಹಾಜರಾಗದಿದ್ದಾಗ ನ್ಯಾಯಾಲಯವೇ ವಕೀಲರನ್ನು ನೇಮಿಸಿಕೊಡಬೇಕು: ಹೈಕೋರ್ಟ್

Share It

ಬಂಧನಕ್ಕೆ ಒಳಗಾಗಿರುವ ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರಿಗೆ ನ್ಯಾಯಾಲಯವೇ ಕಾನೂನು ನೆರವು ಮೂಲಕ ವಕೀಲರನ್ನು ನೇಮಿಸಿಕೊಡುವ ಬಾದ್ಯತೆ ಹೊಂದಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೋಮಶೇಖರ ಅಲಿಯಾಸ್ ಸೋಮ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಸಂವಿಧಾನದ ವಿಧಿ 39(ಎ) ನಲ್ಲಿ ಆರ್ಥಿಕ ಕಾರಣಗಳೂ ಸೇರಿದಂತೆ ಯಾವುದೇ ಅಸಮರ್ಥತೆಗಳ ಕಾರಣದಿಂದಾಗಿ ಯಾವುದೇ ನಾಗರಿಕನಿಗೆ ನ್ಯಾಯ ಪಡೆಯುವ ಅವಕಾಶವನ್ನು ನಿರಾಸರಿಸುವಂತಿಲ್ಲ ಎಂದು ಹೇಳಿದೆ. ಹಾಗೆಯೇ, ಇಂತಹ ಸಂದರ್ಭಗಳಲ್ಲಿ ಉಚಿತ ಕಾನೂನು ನೆರವು ನೀಡಲು ಅಗತ್ಯ ಕಾನೂನು ರೂಪಿಸುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ.

ಈ ಉದ್ದೇಶವನ್ನು ಈಡೇರಿಸಲು ಕಾನೂನು ಸೇವಾ ಪ್ರಾಧಿಕಾರ ರೂಪಿಸಲಾಗಿದೆ. ಪ್ರಾಧಿಕಾರವು ರಾಷ್ಟ್ರೀಯ ಮಟ್ಟದಿಂದ ಹಿಡಿದು ತಾಲೂಕು ಹಂತದವರೆಗೆ ಇದ್ದು, ಸಿಆರ್ಪಿಸಿ ಸೆಕ್ಷನ್ 304ರ ಪ್ರಕಾರ ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿದೆ ಎಂದು ಹೈಕೋರ್ಟ್ ಹೇಳಿದೆ.

ಅಲ್ಲದೇ, ಅರ್ಜಿದಾರ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಈತನ ಪರ ವಕೀಲರು ಪಾಟಿ ಸವಾಲಿನ ವಿಚಾರಣೆ ವೇಳೆ ಹಾಜರಾಗಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವು ನೀಡುವ ಬಾದ್ಯತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿತ್ತು.

ಆದರೆ, ವಿಚಾರಣಾ ನ್ಯಾಯಾಲಯ ಉಚಿತ ಕಾನೂನು ನೆರವು ನೀಡಿಲ್ಲ. ಸಾಕ್ಷ್ಯಗಳ ಪಾಟೀ ಸವಾಲು ನಡೆಸದೇ ಶಿಕ್ಷೆ ವಿಧಿಸಿದ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರ ಸೋಮಶೇಖರನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗೆಯೇ, ಅರ್ಜಿದಾರನಿಗೆ ವಕೀಲರ ನೆರವು ನೀಡಬೇಕು, ಜತೆಗೆ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಸೋಮಶೇಖರ ಪ್ರೀತಿಯ ಹೆಸರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿ ಸಂತ್ರಸ್ತೆಯ ಸೋದರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 506, 323 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 5, 6 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಆರೋಪಿಗೆ ಸಾಕ್ಷ್ಯಗಳ ಪಾಟಿ ಸವಾಲಿಗೆ ಅವಕಾಶ ನೀಡಿದ್ದರೂ ಆರೋಪಿ ಪರ ವಕೀಲರು ಹಾಜರಾಗಿರಲಿಲ್ಲ.

(CRIMINAL APPEAL NO. 328/2018)


Share It

You cannot copy content of this page