News

ಮಾಧ್ಯಮಗಳ ವಿರುದ್ಧ ಅಸಮಾಧಾನ: ಬಹಿರಂಗ ಪತ್ರ ಬರೆದ ಸುಪ್ರೀಂ ಕೋರ್ಟ್ ವಕೀಲ

Share It

ಸುಪ್ರೀಂ ಕೋರ್ಟ್ ವಕೀಲ ಹಾಗೂ ಕೆಪಿಸಿಸಿ ಮಾಧ್ಯಮ ವಕ್ತಾರರು ಆಗಿರುವ ಸಂಕೇತ್ ಎಂ ಏಣಗಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದಿರುವ ಸಂಕೇತ್ ಏಣಗಿ, ಏಕಪಕ್ಷೀಯ ಮನಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಮುಂದೆಂದೂ ತಾವು ಟಿವಿ ಮಾಧ್ಯಮಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.

ಸಂಕೇತ್ ಏಣಗಿ ಪತ್ರ:
ಮಾಧ್ಯಮ ರಂಗಕ್ಕೆ ನನ್ನ ಬಹಿರಂಗ ಪತ್ರ..

ನಾನು ಕಂಡಂತೆ, ಮಾಧ್ಯಮ ರಂಗಕ್ಕೆ ನಾಗರಿಕ ಸಮಾಜ ಹಾಗೂ ಪ್ರಜಾಪ್ರಭುತ್ವದಲ್ಲಿ ಅದರದ್ದೇ ಆದ ವಿಶೇಷ ಗೌರವ, ಜವಾಬ್ದಾರಿ ಮತ್ತು ಕರ್ತವ್ಯವಿದೆ.

ಮಾಧ್ಯಮಗಳಿಗೆ ಸಮಾಜದ ಎಲ್ಲ ವರ್ಗಗಳ ನಂಬಿಕೆ ಹಾಗೂ ವಿಶ್ವಾಸಾರ್ಹತೆ ಗಳಿಸುವುದು ಹಾಗೂ ಜನಪರ ಧ್ವನಿಯಾಗಿ ರೂಪುಗೊಳ್ಳುವುದು ಸುಲಭದ ವಿಚಾರವಲ್ಲ. ಅದಕ್ಕೆ ಬೇಕಾಗಿರುವುದು ಕೇವಲ ದುಡ್ಡಲ್ಲ, ಅದಕ್ಕೂ ಹೆಚ್ಚಾಗಿ ಸಾಮಾಜಿಕ ಬದ್ಧತೆ, ಮೌಲ್ಯಧಾರಿತ ವೃತ್ತಿ ಧರ್ಮ, ಸರಿ-ತಪ್ಪುಗಳ ಸಂಪೂರ್ಣ ಅರಿವು, ಎಲ್ಲ ಪಕ್ಷ ಹಾಗೂ ಸಿದ್ಧಾಂತಗಳಿಂದ ಸಮಾನಾಂತರ ಕಾಯ್ದುಕೊಳ್ಳುವಿಕೆ, ಪಾರದರ್ಶಕತೆ, ಜನಪರ-ಧ್ವನಿ ಎತ್ತುವಿಕೆ, ಯಾವುದೇ ಪ್ರಬಲ ಶಕ್ತಿ ಹಾಗೂ ಪಕ್ಷಗಳ ಆಮಿಷಕ್ಕೆ ಯಾವತ್ತೂ ಒಳಗಾಗದಿರುವುದು, ಇತ್ಯಾದಿ.. ಇವೆಲ್ಲವು, ಎಲ್ಲ ಮಾಧ್ಯಮಗಳಿಗೆ  ನಿಲುಕದ್ದು. ಅದೊಂದು ಅವಿರತ ತಪಸ್ಸು ಹಾಗೂ ಬದ್ಧತೆ, ಎಲ್ಲ ಕಾಲಕ್ಕೂ ಹಾಗೂ ಯಾವುದೇ ಪರಿಸ್ಥಿತಿಯಲ್ಲಿ.

ದುರದೃಷ್ಟವಶಾತ್, ಇತ್ತೀಚೆಗೆ ಕೆಲವು ಮಾಧ್ಯಮಗಳು ಹಾಗೂ ಅವುಗಳ ಪ್ರತಿನಿಧಿಗಳು ಯಾವುದೇ ಒಂದು ಪಕ್ಷದ ಹಾಗೂ ಸಿದ್ದಾಂತಕ್ಕೆ ಮುಗಿಬಿದ್ದು ಹಾಗೂ ಅವುಗಳ ಭ್ರಮೆಗಳಿಗೆ ಹಾಗೂ ಆಮಿಷಗಳಿಗೆ ಒಳಪಟ್ಟವರಂತೆ ಗೋಚರಿಸುತ್ತ, ತಮ್ಮ ವೃತ್ತಿ ಧರ್ಮ, ಗೌರವ, ಜವಾಬ್ದಾರಿ ಹಾಗೂ ಕರ್ತವ್ಯಗಳನ್ನೇ ಮರೆತು ಯಾವುದೇ ಒಂದು ಪಕ್ಷದ ಅಧಿಕೃತ ಪ್ರತಿನಿಧಿಗಳಂತೆ ಹಾಗೂ paid ಏಜೆಂಟ್ ರಂತೆ ವರ್ತಿಸುತ್ತ ಚರ್ಚೆ ನಡೆಸುತ್ತಿರುವುದು ಹಾಗೂ ಚರ್ಚೆಗಳ ದಿಕ್ಕನ್ನು ಬದಲಿಸುತ್ತಿರುವುದನ್ನು, ಚರ್ಚೆಯ ವಿಚಾರವನ್ನು  ಒಂದು ಪಕ್ಷದ ಅಣತಿಯಂತೆ ಅವರ ಅನುಕೂಲಕ್ಕೆ ತಕ್ಕಂತೆ ತಿರುಚ್ಚುತ್ತಿರುವುದನ್ನು ನೋಡಿದರೆ ಹಾಗೂ ಇವರು ತಮ್ಮ ಮಾಧ್ಯಮವನ್ನೂ ಹಾಗೂ ತಮ್ಮ ಮಾಧ್ಯಮ ಸ್ವಾತಂತ್ರವನ್ನು ಯಾವುದೇ ಒಂದು ಪಕ್ಷದ ಮುಖವಾಣಿಯಂತೆ ಕೊಂಡೊಯ್ಯುತ್ತಿರುವುದನ್ನು ಕಂಡರೆ, ಇಂಥವರಿಂದ ಮೌಲ್ಯಧಾರಿತ ಮಾಧ್ಯಮ ವರ್ಗಕ್ಕೆ ಹಾಗೂ ಮಾಧ್ಯಮ ರಂಗಕ್ಕೆ ಇನ್ಮುಂದೆ ಉಳಿಗಾಲವಿಲ್ಲ ಎನ್ನುವ ದುರಂತ ಚಿತ್ರಣ ಖಚಿತಗೊಳ್ಳುತ್ತಿದೆ. ಹಾಗಾಗಿಯೇ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇಷ್ಟೊಂದು ಪ್ರಬಲಗೊಂಡು ಮಾಧ್ಯಮ ರಂಗ ಇಷ್ಟೊಂದು ಬಳಲುತ್ತಿರುವುದು.

ಕೆಲವು ಮಾಧ್ಯಮಗಳು ತಮ್ಮ ಅಸ್ತಿತ್ವಕ್ಕಾಗಿ ಹಾಗೂ ತಮ್ಮ ವ್ಯವಹಾರಿಕ ಅನುಕೂಲಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿರುವುದು ಇತ್ತೀಚೆಗೆ ಹೊಸತೇನಲ್ಲ. ಅದೇನು ಅವರ ಅನಿವಾರ್ಯತೆಯೋ ಅಥವಾ ಅವಶ್ಯಕತೆಯೋ ಎನ್ನುವ ಕುರಿತು ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಆದರೆ, ಕೆಲವು ಮಾಧ್ಯಮಗಳು ಈ ಮೌಲ್ಯರಹಿತ ಪ್ರಪಾತಕ್ಕೆ ತಮ್ಮನ್ನು ತಾವೇ ತಳ್ಳಿಕೊಳ್ಳುತ್ತಿರುವುದನ್ನು ಹಾಗೂ ಇವರೆಲ್ಲ ಮಾಧ್ಯಮ ರಂಗದ ಘನತೆ ಹಾಗೂ ಗೌರವವನ್ನು ಇಷ್ಟೊಂದು ಮುಕ್ತವಾಗಿ ಬಲಿಕೊಡುತ್ತಿರುವುದನ್ನು ನೋಡಿದರೆ, ಇವರೆಲ್ಲರ ಬಗ್ಗೆ ಒಂದು ಕ್ಷಣ ಕನಿಕರ ಹುಟ್ಟುತ್ತದೆ.

ಏನೇ ಆಗಲಿ, ಆ ಕೆಲವು ಮಾಧ್ಯಮಗಳು ಇನ್ನಾದರೂ ತನ್ನ ಜವಾಬ್ದಾರಿಗಳನ್ನು  ಅರಿತು ಸಮಾಜ ಕಟ್ಟುವ ಕೆಲಸ ಮಾಡಲಿ. ನಾಗರಿಕ ಸಮಾಜವನ್ನು ಅಭಿವೃದ್ಧಿ, ಶಾಂತಿ ಹಾಗೂ ನೆಮ್ಮದಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ  ಇನ್ನಾದರೂ ತಮ್ಮ ಹಾಗೂ ಮಾಧ್ಯಮ ರಂಗದ ಗೌರವ, ಸಾಮಾಜಿಕ ಕಾಳಜಿ ಹಾಗೂ ಜವಾಬ್ದಾರಿಯನ್ನು ಆ ಕೆಲವು ಮಾಧ್ಯಮಗಳು ಅರಿತುಕೊಳ್ಳಲಿ. ಈ ಕುರಿತು ಮಾಧ್ಯಮ ರಂಗ ಇನ್ನಾದರೂ ಗಂಭೀರವಾಗಿ ಯೋಚಿಸುತ್ತದೆ, ಎಂದು ಆಶಿಸುತ್ತೇನೆ.
~ ಸಂಕೇತ ಏಣಗಿ


Share It

You cannot copy content of this page