ಒಪ್ಪಿತ ಲೈಂಗಿಕ ಸಂಬಂಧಕ್ಕೂ ಅತ್ಯಾಚಾರಕ್ಕೂ ವ್ಯತ್ಯಾಸವಿದೆ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವಿದ್ದ ಸಂದರ್ಭಗಳಲ್ಲಿ ಅದನ್ನು ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರ ಆಪರಾಧವೆಂದು ಪರಿಗಣಿಸಲಾಗದು ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಇದೇ ವೇಳೆ ಸಂತ್ರಸ್ತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಿಸಿದ್ದ ದೂರನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. ಸಂತ್ರಸ್ತರು ನಿರ್ದಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣಕ್ಕಾಗಿಯೇ ಆರೋಪಿ ದೌರ್ಜನ್ಯ ಎಸಗಿದ್ದರೆ ಮಾತ್ರವೇ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ರಕ್ಷಣೆ, ಪರಿಹಾರ ಕೋರಬಹುದು. ಇಲ್ಲದಿದ್ದರೆ ಕಾಯ್ದೆಯನ್ನು ಅನ್ವಯಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಆಂಧ್ರದ ಅನಂತಪುರ ಜಿಲ್ಲೆಯ ಕಾನೂನು ವಿದ್ಯಾರ್ಥಿನಿಯೊಬ್ಬರು ದಾಖಲಿಸಿರುವ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮೂಲದ ಸಿಐಎಸ್ಎಫ್ ಕಾನ್ಸಟೆಬಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವಿದ್ದಾಗ ಅದನ್ನು ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರ ಅಪರಾಧ ಎನ್ನಲಾಗದು. ಒಪ್ಪಿತ ಸಂಬಂಧಕ್ಕೂ ಅತ್ಯಾಚಾರಕ್ಕೂ ವ್ಯತ್ಯಾಸವಿದೆ. ಇಂತಹ ಸಂದರ್ಭಗಳಲ್ಲಿ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ.
ಆರೋಪಿ ನಿಜಕ್ಕೂ ಮದುವೆಯಾಗುವ ಇಚ್ಚೆ ಹೊಂದಿದ್ದು ನಂತರ ಲೈಂಗಿಕ ಸಂಬಂಧ ಬೆಳೆಸಿದ್ದನೋ ಅಥವಾ ಕೇವಲ ಲೈಂಗಿಕ ಆಸೆ ಈಡೇರಿಸಿಕೊಳ್ಳಲಿಕ್ಕಾಗಿ ಮದುವೆ ಭರವಸೆ ನೀಡಿದ್ದನೋ ಎಂಬುದನ್ನು ಗಮನಿಸಬೇಕಾಗುತ್ತದೆ. ಒಂದು ವೇಳೆ ಲೈಂಗಿಕ ಆಸೆ ಈಡೇರಿಸಿಕೊಳ್ಳಲು ಸುಳ್ಳು ಮದುವೆ ಭರವಸೆ ನೀಡಿದ್ದರೆ ಅದು ವಂಚನೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಲೈಂಗಿಕತೆಗೆ ಪರಸ್ಪರ ಒಪ್ಪಿಗೆ ಇದ್ದಾಗ ಅದನ್ನು ಅತ್ಯಾಚಾರ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯೂ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾರೆ. ನಿರ್ದಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಉದ್ದೇಶದಿಂದಲೇ ಆರೋಪಿ ಅಪರಾಧ ಎಸಗಿದ್ದರೆ ಈ ಕಾಯ್ದೆಯನ್ನು ಅನ್ವಯಿಸಬಹುದು. ಹೊರತುಪಡಿಸಿ ಜಾತಿ ಉದ್ದೇಶವಿಲ್ಲದ ಇಂತಹ ಅಪರಾಧಗಳಿಗೆ ಅನ್ವಯಿಸಲಾಗದು ಎಂದು ಅಭಿಪ್ರಾಯಪಟ್ಟು ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ: ದೆಹಲಿ ಮೂಲದ ಸಿಐಎಸ್ಎಫ್ ಕಾನ್ಸಟೇಬಲ್ ವಿರುದ್ಧ ಆಂಧ್ರದ ಅನಂತಪುರ ಜಿಲ್ಲೆಯ ಕಾನೂನು ವಿದ್ಯಾರ್ಥಿನಿಯೊಬ್ಬರು ಅತ್ಯಾಚಾರ ಆರೋಪದಡಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ, ತನಗೂ ಆರೋಪಿಗೂ 6 ವರ್ಷಗಳಿಂದ ಪರಸ್ಪರ ಪರಿಚಯವಿದ್ದು 2019ರಲ್ಲಿ ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ.
ಧೋಬಿ ಸಮುದಾಯಕ್ಕೆ ಸೇರಿದ ಆತ ಮದುವೆಯಾಗುವುದಾಗಿ ಭರವಸೆ ನೀಡಿ 6 ತಿಂಗಳು ಕಾಯುವಂತೆ ತಿಳಿಸಿದ್ದ. ವರ್ಷದ ಬಳಿಕ ತಮ್ಮ ಪೋಷಕರು ಹುಡುಗಿ ಪರಿಶಿಷ್ಟ ಜಾತಿಗೆ ಸೇರಿದ್ದಾಳೆ ಎಂಬ ಕಾರಣಕ್ಕೆ ಮದುವೆ ನಿರಾಕರಿಸಿದ್ದಾರೆ ಎಂದು ನೆಪ ಹೇಳಿ ತನಗೆ ವಂಚಿಸಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದರು.
ದೂರಿನ ಅನ್ವಯ ಅನಂತಪುರ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) 420 (ವಂಚನೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v), 3(1)(w), 3(1)(r)(s), 3(2)(v), 3(2) (va) ಅಡಿ ಎಫ್ಐಆರ್ ದಾಖಲಿಸಿದ್ದರು. ನಂತರ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
(CRL.P 4097/2022)