News

ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹಿಸಿ ನ್ಯಾಯವಾದಿಗಳ ಬೃಹತ್ ಪ್ರತಿಭಟನೆ

Share It

ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸಿ ಇಂದು ಬೆಂಗಳೂರು ವಕೀಲರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಜಮಾಯಿಸಿದ ಸಾವಿರಾರು ವಕೀಲರು ವಕೀಲರ ರಕ್ಷಣಾ ಕಾಯ್ದೆಯನ್ನು ತುರ್ತಾಗಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ವಕೀಲರ ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಬಂದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶೀಘ್ರವೇ ವಕೀಲರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು. ಅಲ್ಲದೇ ಸಿಎಂ ವಕೀಲರ ಮನವಿಯನ್ನು ಸ್ವೀಕರಿಸುವಂತೆ ತಿಳಿಸಿದ್ದಾರೆ. ನಿಮ್ಮ ಬೇಡಿಕೆಯ ಕುರಿತು ಸರ್ಕಾರ ಗಮನ ಹರಿಸುತ್ತಿದೆ.

ಆದರೆ, ವಕೀಲರ ರಕ್ಷಣಾ ಮಸೂದೆ ಇನ್ನೂ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ನೀವು ಸರ್ಕಾರದ ಗಮನ ಸೆಳೆದ್ದಿದ್ದೀರಿ. ನಿಮ್ಮ ಮನವಿ ಕುರಿತು ಸಿಎಂ ಗಮನಕ್ಕೆ ತರುತ್ತೇನೆ ಎಂದರು. ಈ ವೇಳೆ ಕೆಲ ಪ್ರತಿಭಟನಾ ನಿರತ ವಕೀಲರು ಕಾನೂನು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಸಚಿವರು ವಕೀಲರನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಅವರು ಈಗಲೇ ಇಲ್ಲಿಗೆ ಬಂದು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು ಯಾರೂ ಯಾರನ್ನೂ ಹಗುರವಾಗಿ ಪರಿಗಣಿಸಿಲ್ಲ. ವಕೀಲರು ಅನ್ಯಥಾ ಭಾವಿಸಬಾರದು ಎಂದು ಮನವಿ ಮಾಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಈ ಚಳಿಗಾಲದ ಅಧಿವೇಶನದಲ್ಲಿಯೇ ಕಾಯ್ದೆ ಜಾರಿ ಆಗಬೇಕು ಎಂದು ಗೃಹ ಸಚಿವರ ಸಮ್ಮುಖದಲ್ಲೇ ಆಗ್ರಹಿಸಿದರು. ಜತೆಗೆ ಈ ಸಂಬಂಧ ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.


Share It

You cannot copy content of this page