ಅಕ್ರಮ ಸಂಬಂಧ ಆರೋಪಕ್ಕೆ ಸಂಬಂಧಿಸಿದಂತೆ ಪತ್ನಿಯ ಪ್ರಿಯಕರನ ಮೊಬೈಲ್ ಟವರ್/ಫೋನ್ ಕಾಲ್ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ವೈವಾಹಿಕ ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಸ್ಥಳ ಮತ್ತು ಫೋನ್ ಕಾಲ್ ವಿವರಗಳನ್ನು ನೀಡುವಂತೆ ಕೋರ್ಟ್ ಆದೇಶಿಸಲಾಗದು. ಹಾಗೆ ನಿರ್ದೇಶನ ನೀಡಿದರೆ ಪ್ರಕರಣದಲ್ಲಿ ಪಕ್ಷಕಾರರಾಗಿರದ ವ್ಯಕ್ತಿಯ ಖಾಸಗಿತನ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ನಗರದ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೂರನೇ ವ್ಯಕ್ತಿ (ಪತ್ನಿಯ ಪ್ರಿಯಕರ ಎನ್ನಲಾದ ವ್ಯಕ್ತಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ. ಇದೇ ವೇಳೆ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸಂವಿಧಾನದ 21ನೇ ವಿಧಿ ಅಡಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕು ನೀಡಲಾಗಿದೆ. ಇದರಲ್ಲಿ ಖಾಸಗಿತನದ ಹಕ್ಕು ಕೂಡ ಸೇರಿದೆ. ಖಾಸಗಿತನ ಕಾಪಾಡಿಕೊಳ್ಳುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಿರುತ್ತಾನೆ. ಕೌಟುಂಬಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಯ ವಿವರ ನೀಡುವಂತೆ ನಿರ್ದೇಶಿಸುವುದು ಇಂತಹ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯವು ಅರ್ಜಿದಾರರ ಮೊಬೈಲ್ ಟವರ್ ವಿವರ ಮತ್ತು ಕರೆಗಳ ವಿವರಗಳನ್ನು ನೀಡುವಂತೆ ಆದೇಶಿಸಿದೆ. ಇದೇ ಮೊದಲ ಬಾರಿಗೆ, ಅದೂ ಅನೈತಿಕ ಸಂಬಂಧದ ಕಾರಣಕ್ಕೆ ಅರ್ಜಿದಾರರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಈ ವಿಚಾರಣೆಯಲ್ಲಿ ಅರ್ಜಿದಾರ ಮೂರನೇ ವ್ಯಕ್ತಿಯಾಗಿದ್ದಾರೆ. ತನ್ನ ಹೆಂಡತಿಯು ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನುವ ಗಂಡನ ಅನುಮಾನವನ್ನು ಪರಿಶೀಲಿಸಲಿಕ್ಕಾಗಿ ಆತನ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ. ಇಂತಹ ಕೋರಿಕೆಗೆ ಕಾನೂನಿನ ಮನ್ನಣೆ ಇಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
ಪ್ರತಿಯೊಬ್ಬ ನಾಗರಿಕನಿಗೂ ತನ್ನ, ಕುಟುಂಬದ ಹಾಗೂ ವೈವಾಹಿಕ ಮತ್ತು ಇತರೆ ಸಂಬಂಧಗಳ ವಿಚಾರದಲ್ಲಿ ಖಾಸಗಿತನವನ್ನು ಕಾಯ್ದುಕೊಳ್ಳುವ ಹಕ್ಕು ಹೊಂದಿರುತ್ತಾನೆ. ಮೊಬೈಲ್ ಮಾಹಿತಿಯೂ ಸಹ ಖಾಸಗಿತನದ ಭಾಗ ಆಗಿರುವುದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ಸಮ್ಮತವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಆದೇಶ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವ ದಂಪತಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದಲ್ಲಿ ಹೆಂಡತಿ ವಿರುದ್ಧ ಆರೋಪ ಮಾಡಿದ್ದ ಗಂಡ, ತನ್ನ ಪತ್ನಿ ಮೂರನೇ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಲು ಆತನ ಮೊಬೈಲ್ ಫೋನ್ ಕಾಲ್ ಮತ್ತು ಟವರ್ ಸ್ಥಳದ ಮಾಹಿತಿಗಳನ್ನು ನೀಡುವಂತೆ ಮೊಬೈಲ್ ಕಂಪೆನಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಗಂಡನ ಮನವಿ ಮೇರೆಗೆ ಕೌಟುಂಬಿಕ ನ್ಯಾಯಾಲಯ 2019 ರ ಸೆಪ್ಟೆಂಬರ್ 23 ರಂದು ಪ್ರಿಯಕರನ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಮೊಬೈಲ್ ಕಂಪೆನಿಗೆ ನಿರ್ದೇಶಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಪ್ರಿಯಕರ ಎನ್ನಲಾದ ಮೂರನೇ ವ್ಯಕ್ತಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚ್ಚೇದನ ಪ್ರಕರಣದಲ್ಲಿ ತಾನು ಪ್ರತಿವಾದಿಯಲ್ಲ. ಹಾಗಿದ್ದರೂ ಕೌಟುಂಬಿಕ ನ್ಯಾಯಾಲಯ ತನ್ನ ಮೊಬೈಲ್ ಕರೆ/ಟವರ್ ವಿವರ ಕೇಳಿದೆ. ಇದರಿಂದ ತನ್ನ ಖಾಸಗಿತನಕ್ಕೆ ಧಕ್ಕೆಯಾಗಲಿದ್ದು, ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.
(WP 13165/2019)