ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಪರಿಣಾಮ ಅಪಘಾತಕ್ಕೆ ಒಳಗಾಗಿ ಹಾನಿಗೊಳಗಾದವರು ದೂರು ದಾಖಲಿಸಲು ಬಂದಾಗ ಅವರಿಗೆ ಕಾರಣಗಳನ್ನು ನೀಡದೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಪೊಲೀಸರು ಮತ್ತು ಗೃಹ ಇಲಾಖೆಗೆ ನಿರ್ದೇಶಿಸಿದೆ.
ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಕೋರಿ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಲೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ರಸ್ತೆ ಗುಂಡಿಗಳಿಂದ ಅಪಘಾತಕ್ಕೆ ಒಳಗಾಗಿ ಸಾವು ನೋವಿಗೆ ಗುರಿಯಾದವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದಾಗ ಪೊಲೀಸ್ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಅಂಶವನ್ನು ಪೀಠ ಪ್ರಸ್ತಾಪಿಸಿದೆ. ಅಲ್ಲದೇ, ರಸ್ತೆ ಗುಂಡಿಗಳಿಂದ ಹಾನಿಗೊಳಗಾದವರು ದೂರು ನೀಡಲು ಬಂದಾಗ ತಾಂತ್ರಿಕ ಕಾರಣಗಳನ್ನು ನೀಡಿ ವಾಪಸ್ಸು ಕಳುಹಿಸಬಾರದು. ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ನ್ಯಾಯಪೀಠ ಗೃಹ ಇಲಾಖೆಗೆ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು (ಎನ್‌ಎಚ್‌ಎಐ) ಬಿಬಿಎಂಪಿ ಈವರೆಗೆ ಮುಚ್ಚಿರುವ ರಸ್ತೆಗುಂಡಿಗಳ ಗುಣಮಟ್ಟ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಹಾಗೆಯೇ, ಈ ಸಂಬಂಧ ಅಗತ್ಯ ದಾಖಲೆಗಳನ್ನು ಬಿಬಿಎಂಪಿಯು ಎನ್‌ಎಚ್‌ಎಐನ ಪರಿಶೀಲನಾ ಸಮಿತಿಗೆ ಒದಗಿಸಿ ಕೊಡಬೇಕು. ಎನ್ಎಚ್ಎಐ ಸಮಿತಿ ಪರಿಶೀಲನೆ ನಡೆಸಿದ ವರದಿಯನ್ನು 2023ರ ಫೆಬ್ರವರಿ 3ರಂದು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಫೆಬ್ರವರಿ 6 ಕ್ಕೆ ಮುಂದೂಡಿದೆ.
ಇನ್ನು ರಸ್ತೆ ಗುಂಡಿ ಅಪಘಾತಗಳಲ್ಲಿ ಹಾನಿಗೆ ಒಳಗಾದವರಿಗೆ ನೀಡಿರುವ ಪರಿಹಾರ ಕುರಿತ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸುವಂತೆ ಪಾಲಿಕೆಗೆ ಹೈಕೋರ್ಟ್ ನಿರ್ದೇಶಿಸಿದೆ. ಹಾಗೆಯೇ, ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯನ್ನು ಕೂಡ ಪ್ರಕರಣದಲ್ಲಿ ಪ್ರತಿವಾದಿಯಾಗಿ ಸೇರಿಸಲು ಅರ್ಜಿದಾರರಿಗೆ ಸೂಚನೆ ನೀಡಿದೆ.