ಸೈನಿಕರು ನಿವೃತ್ತಿಯಾದ ಬಳಿಕ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ನಿಯಮ 15(5) ಪ್ರಕಾರ ತಮ್ಮ ಜಮೀನನ್ನು ಗೇಣಿದಾರರಿಂದ ಹಿಂಪಡೆಯಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸೇನೆಯಲ್ಲಿದ್ದ ವೇಳೆ ಗೇಣಿಗೆ ನೀಡಿದ್ದ ಜಮೀನನ್ನು ನಿವೃತ್ತಿ ಬಳಿಕ ಹಿಂಪಡೆಯಲು ಹರಸಾಹಸಪಡುತ್ತಿದ್ದ ಪುತ್ತೂರಿನ ಮಾಜಿ ಸೇನಾಧಿಕಾರಿಯಾದ ಲೆಫ್ಟಿನೆಂಟ್ ಕರ್ನಲ್ ಗೋಪಾಲಕೃಷ್ಣ ಭಟ್ ಅವರ ನೆರವಿಗೆ ಹೈಕೋರ್ಟ್ ಧಾವಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಭೂಮಿಯ ಸ್ವಾಧೀನದಲ್ಲಿರುವ ಗೇಣಿದಾರರಿಂದ ಭೂಮಿಯನ್ನು 8 ವಾರಗಳಲ್ಲಿ ಹಿಂಪಡೆದು ಮಾಜಿ ಸೇನಾಧಿಕಾರಿಗೆ ಮರಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಇದೇ ವೇಳೆ ದೇಶ ಕಾಯಲು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿರುವ ಸೇನಾಧಿಕಾರಿ ತಮ್ಮ ಜಮೀನು ಹಿಂಪಡೆಯಲು ದಶಕಗಳ ಕಾಲ ಕಾನೂನು ಹೋರಾಟ ಮಾಡುವಂತಾಗಿರುವುದು ದುರಾದೃಷ್ಟಕರ. ಸೈನಿಕರನ್ನು ಸರ್ಕಾರ ನಿಕೃಷ್ಟವಾಗಿ ಕಾಣುವುದನ್ನು ಬಿಟ್ಟು ಮುತುವರ್ಜಿಯಿಂದ ನಡೆಸಿಕೊಳ್ಳಬೇಕು ಎಂದಿದೆ.
ಇನ್ನು ಉಳುವವನೇ ಭೂಮಿಯ ಒಡೆಯ ಎಂಬ ಹಿಡುವಳಿ ನಿಯಮವನ್ನು ಸೈನಿಕರಿಗೆ ಅನ್ವಯಿಸಲು ಬರುವುದಿಲ್ಲ. ಜಮೀನನ್ನು ಗೇಣಿದಾರರ ವಶಕ್ಕೆ ನೀಡಿದ್ದಲ್ಲಿ ಅಂತ ಜಮೀನನ್ನು ಸೈನಿಕರು ಸೇವೆಯಿಂದ ನಿವೃತ್ತರಾದ ಬಳಿಕ ಹಿಂಪಡೆಯಲು ಮನವಿ ಸಲ್ಲಿಸಲು ಅವಕಾಶವಿದೆ.
ಹಾಗೆಯೇ, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 15(5) ರ ಅನುಸಾರ ಸೈನಿಕರು ನಿವೃತ್ತಿ ಬಳಿಕ ತಮ್ಮ ಜಮೀನಿನ ಮಾಲಿಕತ್ವವನ್ನು ಹಿಂಪಡೆಯಬಹುದು. ಅದರಂತೆ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ನಿವೃತ್ತ ಸೇನಾಧಿಕಾರಿಯ ಜಮೀನನ್ನು 8 ವಾರದಲ್ಲಿ ಮರಳಿ ಕೊಡಿಸಲು ಎಲ್ಲ ಅಗತ್ಯ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗೋಪಾಲಕೃಷ್ಣ ಭಟ್ ಅವರು ತಮ್ಮ ತಂದೆಯಿಂದ ಬಂದಿದ್ದ 4 ಎಕರೆ ಜಮೀನನ್ನು ಗೇಣಿದಾರರಿಂದ ಹಿಂಪಡೆಯಲು ಮುಂದಾಗಿದ್ದರು. ಈ ಭೂಮಿಯನ್ನು ಗೇಣಿದಾರರು 1940 ರಿಂದ ಗೇಣಿ ಮಾಡುತ್ತಿದ್ದರು.
ಹೀಗಾಗಿ, ಜಮೀನಿನ ಮಾಲಿಕತ್ವ ಕೋರಿ 1993 ರಲ್ಲಿ ಗೋಪಾಲಕೃಷ್ಣ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 15(4) ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಿರಲಿಲ್ಲ. ನಂತರದ ಕಾನೂನು ಹೋರಾಟದಲ್ಲಿ ಗೇಣಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನಿವೃತ್ತ ಸೇನಾಧಿಕಾರಿ ಮನವಿ ಪುರಸ್ಕರಿಸಿದೆ.
WRIT PETITION NO.3420 OF 2013 (LR)