ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ಧ್ವಂಸಗೊಳಿಸಿ ಜಾಮಿಯಾ ಮಸೀದಿ ನಿರ್ಮಿಸಲಾಗಿದೆ. ಆದ್ದರಿಂದ ಮಸೀದಿಯ ಜಾಗವನ್ನು ಪುರಾತತ್ವ ಇಲಾಖೆಯಿಂದ ಅಧ್ಯಯನ, ಉತ್ಖನನ ಹಾಗೂ ಸರ್ವೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಮಂಡ್ಯ ಜಿಲ್ಲೆಯ ಭಜರಂಗ ಸೇನೆ ಸಂಘಟನೆ ಅಧ್ಯಕ್ಷ ಬಿ. ಮಂಜುನಾಥ್ ಎಂಬುವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ. ಅರ್ಜಿ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾರರ ಕೋರಿಕೆ ಏನು: ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇಗುಲ ಪುರಾತನ ದೇವಸ್ಥಾನವಾಗಿದ್ದು ಅದನ್ನು ವಿಜಯ ನಗರ ಸಾಮ್ರಾಜ್ಯದಿಂದ ಹಿಡಿದು ಮೈಸೂರು ಅರಸರ ಕಾಲದವರೆಗೆ ಆರಾಧನೆ ಮತ್ತು ಸಂರಕ್ಷಣೆ ಮಾಡಿಕೊಂಡು ಬರಲಾಗಿತ್ತು.
ಈ ದೇವಾಲಯವನ್ನು ಟಿಪ್ಪು ಸುಲ್ತಾನ್ ಆಡಳಿತಾವಧಿಯಲ್ಲಿ 1986-89 ರ ನಡುವೆ ಧ್ವಂಸ ಮಾಡಿ ಜಾಮಿಯಾ ಮಸೀದಿ ನಿರ್ಮಿಸಲಾಗಿದೆ. ಟಿಪ್ಪುವಿನ ಈ ಪ್ರಮಾದವನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರಕ್ಕೆ ಸೇರಿದ ಕರ್ತವ್ಯವಾಗಿದೆ.
ಆದ್ದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ಹೈಕೋರ್ಟ್ ಶ್ರೀರಂಗಪಟ್ಟಣದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವಾದ ಜಾಮಿಯಾ ಮಸೀದಿಯನ್ನು ಸರ್ವೆ, ಉತ್ಖನನ ಹಾಗೂ ಅಧ್ಯಯನ ಮಾಡಿ 30 ದಿನಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಹಾಗೆಯೇ, ದೇವಸ್ಥಾನದ ಆವರಣದಲ್ಲಿರುವ ಗರುಡಗಂಬ ಕಲ್ಯಾಣಿ, ಸ್ಥೂಪ, ದೇವತೆಗಳ ಕಲ್ಲಿನ ಕೆತ್ತನೆಗಳನ್ನು ಮತ್ತು ಹೂತಿಟ್ಟ ವಿಗ್ರಹಗಳನ್ನು ಸಂರಕ್ಷಿಸಿಡುವಂತೆ ಪುರಾತತ್ವ ಸರ್ವೇಕ್ಷಣಾಲಯ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.