News

ವಂಚನೆ ಆರೋಪ: ವಕೀಲನ ಪತ್ನಿ-ಪುತ್ರನಿಗೆ ಹೈಕೋರ್ಟ್ ಜಾಮೀನು

Share It

ಕಕ್ಷೀದಾರರಿಗೆ ನ್ಯಾಯಾಲಯದ ನಕಲಿ ಆದೇಶ ಕಳುಹಿಸಿ ಹಣ ಪಡೆದು ವಂಚಿಸಿದ ಆರೋಪ ಪ್ರಕರಣದಲ್ಲಿ ವಕೀಲರೊಬ್ಬರ ಪತ್ನಿ ಹಾಗೂ ಪುತ್ರನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಆರೋಪ ಹೊತ್ತಿರುವ ವಕೀಲರ ಪತ್ನಿ ಹಾಗೂ ಪುತ್ರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ, ಪ್ರಕರಣದ ಮೊದಲ ಆರೋಪಿಯಾಗಿರುವ ವಕೀಲನ ವಿರುದ್ಧ ಹೈಕೋರ್ಟ್ ಆದೇಶವನ್ನು ನಕಲಿ ಮಾಡಿ ಕಳುಹಿಸಿದ ಆರೋಪವಿದೆ. ಹಾಗೆಯೇ ಪ್ರಕರಣವನ್ನು ನಡೆಸಲು ವಕೀಲರಿಗೆ ನೀಡಿದ್ದ ಹಣವನ್ನು ಅವರ ಪತ್ನಿ ಹಾಗೂ ಪುತ್ರ ಪಡೆದಿರುವ ಆರೋಪವನ್ನು ದೂರುದಾರ ಮಹಿಳೆ ಮಾಡಿದ್ದಾರೆ.

ಆದರೆ, ವಕೀಲರ ಪತ್ನಿ ಹಾಗೂ ಪುತ್ರ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ. ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಇರುವುದು ವಕೀಲನ ವಿರುದ್ಧ ಮಾತ್ರ. ಇನ್ನು ಅರ್ಜಿದಾರರು ಹಣ ಸ್ವೀಕರಿಸಿದ ಆರೋಪವಿದ್ದರೂ ಅವರ ಖಾತೆಗೆ ಹಣ ಸಂದಾಯವಾಗಿಲ್ಲ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಂತಹ ಅಂಶಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಹಾಗೆಯೇ, ಪ್ರಕರಣದಲ್ಲಿ ವಕೀಲರ ಪತ್ನಿ ಹಾಗೂ ಪುತ್ರನ ವಿರುದ್ಧ ನೇರ ಆರೋಪವಿಲ್ಲ. ಒಂದನೇ ಆರೋಪಿ ವಿರುದ್ಧವಷ್ಟೇ ನೇರ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಅಲ್ಲದೇ, ಅರ್ಜಿದಾರರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್, ಅರ್ಜಿದಾರರು ತಲಾ 1 ಲಕ್ಷ ಮೊತ್ತಕ್ಕೆ ಬಾಂಡ್ ನೀಡಬೇಕು. ಮುಂದಿನ 15 ದಿನಗಳಲ್ಲಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಎದುರು ಹಾಜರಾಗಬೇಕು. ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು. ಪ್ರಾಸಿಕ್ಯೂಷನ್ ಸಾಕ್ಷ್ಯಗಳನ್ನು ನಾಶಪಡಿಸಬಾರದು, ಪ್ರಭಾವ ಬೀರಬಾರದು. ತನಿಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಷರತ್ತು ವಿಧಿಸಿದೆ.

ದೂರುದಾರರ ಆರೋಪವೇನು: ಹೈಕೋರ್ಟ್ ನಲ್ಲಿ ದಾಖಲಿಸಿರುವ ಎರಡು ಪ್ರಕರಣದಲ್ಲಿ ವಾದಿಸಲು ವಕೀಲರಿಗೆ 10 ಲಕ್ಷ ರೂಪಾಯಿ ಹಣ ನೀಡಿದ್ದೆ. ಕೇಸಿನ ಸಂಬಂಧ ಹೈಕೋರ್ಟ್ ನಲ್ಲಿ ಯಾವುದೇ ಆದೇಶವಾಗಿಲ್ಲದಿದ್ದರೂ ವಕೀಲರೇ ಹೈಕೋರ್ಟ್ ಸೀಲ್ ಮತ್ತು ರಿಜಿಸ್ಟ್ರಾರ್ ಸಹಿ ನಕಲು ಮಾಡಿ ನ್ಯಾಯಾಲಯದ ಆದೇಶವನ್ನು ಸೃಷ್ಟಿಸಿ ವಾಟ್ಸಾಪ್ ಮೂಲಕ ಕಳುಹಿಸಿದ್ದರು.

ಹೈಕೋರ್ಟ್ ವೆಬ್ ಸೈಟ್ ನಲ್ಲಿ ಪರಿಶೀಲಿಸಿದಾಗ ಅದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಆದೇಶ ಇಲ್ಲದಿರುವುದು ತಿಳಿಯಿತು. ವಕೀಲರನ್ನು ಕೇಳಿದರೆ ಕೋವಿಡ್ ಕಾರಣಕ್ಕೆ ಕೆಲ ಆದೇಶಗಳು ವೆಬ್ ಸೈಟ್ ನಲ್ಲಿ ಅಪ್ಲೋಡ್ ಆಗಿಲ್ಲವೆಂದು ಸಮಜಾಯಿಸಿ ನೀಡಿದರು.

ವಕೀಲರ ನಡೆಯ ಕುರಿತಂತೆ ಸಂಶಯ ವ್ಯಕ್ತಪಡಿಸಿದಾಗ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು. ಹಣ ಪಾಪಸ್ಸು ಕೊಡುವಂತೆ ಕೇಳಿದರೂ ವಾಪಸ್ಸು ಕೊಟ್ಟಿಲ್ಲ ಎಂದು ದೂರುದಾರ ಮಹಿಳೆ ಆರೋಪಿಸಿದ್ದರು. ಅಲ್ಲದೇ ಈ ಸಂಬಂಧ ವಕೀಲರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಪೊಲೀಸರು ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 465, 468 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 66(C),66(D) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲರ ಪತ್ನಿ ಮತ್ತು ಪುತ್ರ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್ ಮನವಿ ಪರಿಗಣಿಸದೇ ಇದ್ದುದರಿಂದ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
(CRIMINAL PETITION NO.9966/2022)


Share It

You cannot copy content of this page