ಲೇಖಕರು: ಎಸ್.ಎಚ್ ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು.
ಭ್ರಷ್ಟಾಚಾರದ ಬಗ್ಗೆ ಎಲ್ಲರಿಗೂ ಆಕ್ರೋಶ ಇದೆ. ಬಹಳಷ್ಟು ಜನರು ಇದರ ವಿರುದ್ಧ ಹೋರಾಟ ನಡೆಸಿದ್ದಾರೆ. ಕೆಲವರು ಕೇವಲ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ನಿಜವಾಗಿಯೂ ಕೆಲವರು ಗಂಭೀರ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಆದರೆ ವಿರಾಟ್ ಸ್ವರೂಪ ತಾಳಿದ ಭ್ರಷ್ಟಾಚಾರದ ವಿರುದ್ಧ ನರಿಯ ಕೂಗು ಗಿರಿಯ ಮುಟ್ಟೀತೇ ಎನ್ನುವಂತೆ ಭ್ರಷ್ಟಾಚಾರ ವಿರೋಧಿ ಹೋರಾಟ ಬಹಳ ದುರ್ಬಲವೆನಿಸುತ್ತದೆ. ಭ್ರಷ್ಟಾಚಾರದ ದುಷ್ಪರಿಣಾಮ ಸರಿಪಡಿಸಲು ಬಂದವರನ್ನೇ ಸರಿಪಡಿಸಿದ್ದಾರೆ ಅಥವಾ ಸರಿಸಿ ಬಿಟ್ಟಿದ್ದಾರೆ.
ಹಲವಾರು ಲಂಚ ವಿರೋಧಿ ಹೋರಾಟಗಾರನ್ನು ಅಮಿಷ ನೀಡಿ ಸರಿಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಕಟ್ಟಾ ಹೋರಾಟಗಾರರ ಕೊಲೆ ಆಗಿದೆ. ಇನ್ನು ಎಷ್ಟೋ ಹೋರಾಟಗಾರರು ಸ್ಥಳೀಯ ರಾಜಕಾರಣಿಗಳ ಭ್ರಷ್ಟಾಚಾರ ಬಯಲಿಗೆಳೆದು, ಅವರ ವಿರೋಧ ಕಟ್ಟಿಕೊಂಡು ವಿನಾ ಕಾರಣ ಸುಳ್ಳು ಕೇಸುಗಳನ್ನು ಎದುರಿಸುತ್ತಿದ್ದಾರೆ. ಲಂಚದ ವ್ಯವಹಾರದಲ್ಲಿ ರಾಜಕಾರಣಿಗಳು ಮತ್ತು ನೌಕರರು ಹಾಲು ಸಕ್ಕರೆ ತರಹ ಬೆರೆತಿರುತ್ತಾರೆ ಎನ್ನುವುದು ಸುಸ್ಪಷ್ಟ. ಈ ಹಾಲು ಸಕ್ಕರೆ ಸಂಬಂಧದಲ್ಲಿ ಲಂಚ ವಿರೋಧವನ್ನು ಹುಳಿ ಎಂದು ಭಾವಿಸಿ ಈ ಲಂಚ ವಿರೋಧಿಗಳನ್ನು ತಮ್ಮಿಂದ ದೂರ ಇರುವಂತೆ ಮಾಡುತ್ತಾರೆ, ಇಲ್ಲ ಅವರನ್ನು ಇಲ್ಲವಾಗಿಸುತ್ತಾರೆ.
ಇನ್ನು ಲಂಚ ನಿಷೇದ ಕಾನೂನು ಕೇವಲ ಬೆದರು ಗೊಂಬೆಯಂತೆ ಇವೆ. ಹೇಗೆ ಕೊರೊನ ಏನೂ ಮಾಡದು ಎಂದು ಜನ ಇಂದು ಇಂದು ಮಾಸ್ಕ್ ಹಾಕದೇ, ದೈಹಿಕ ಅಂತರ ಕಾಪಾಡದೇ ಮನಸ್ವಿಯಾಗಿ ವರ್ತಿಸುತ್ತಿರುವರೋ, ಹಾಗೆಯೇ ಲಂಚ ತಡೆ ಕಾನೂನು ಏನೂ ಮಾಡದು ಎನ್ನುವಂತೆ ಭ್ರಷ್ಟರು ನಿರಾತಂತಕವಾಗಿ ತಮ್ಮ ಕಾಯಕದಲ್ಲಿ ನಿಶ್ಚಿಂತೆಯಿಂದ ತೊಡಗಿದ್ದಾರೆ.
ನಮ್ಮ ವ್ಯವಸ್ಥೆ ಭ್ರಷ್ಟಾಚಾರದ ಕೊಳ. ಭ್ರಷ್ಟ ಮೀನುಗಳು ಮಾತ್ರ ಈ ಕೊಳದಲ್ಲಿ ಬದುಕಬಲ್ಲವು. ನಮ್ಮ ರಾಜಕಾರಣಿಗಳು ಪ್ರತಿದಿನ ಭ್ರಷ್ಟಾಚಾರ ವಿರೋಧಿ ಭಾಷಣ ಮಾಡುತ್ತಾರೆ. ಅದು ಹೇಗಿದೆ ಎಂದರೆ ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತಿದೆ.
ಅನ್ಯಾಯ ಮಾಡುವದು ಎಷ್ಟು ತಪ್ಪೋ ಅದನ್ನು ಸಹಿಸುವುದು ಅಷ್ಟೇ ತಪ್ಪು. ಇದು ಭ್ರಷ್ಟಾಚಾರದ ವಿಷಯದಲ್ಲಿ ಪೂರ್ಣ ಅನ್ವಯಿಸುತ್ತದೆ. ಇಲ್ಲಿ ಭ್ರಷ್ಟಾಚಾರ ಮಾಡುವದು ಎಷ್ಟು ತಪ್ಪೋ, ಅಷ್ಟೇ ಅದನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿರುವ ಸಮಾಜದ್ದೂ ತಪ್ಪು.
ಆದರೆ ಜನ ಮೂಕ ಪ್ರೇಕ್ಷಕರಾಗಿ ಇರಲು ಕಾರಣ ಕೂಡಾ ಇವೆ. ಇದನ್ನು ವ್ಯಕ್ತಿಯಾಗಿ ಒಬ್ಬನೇ ಹೋರಾಟ ಮಾಡಿ ಎದುರಿಸಲು ಸಾಧ್ಯವಿಲ್ಲ. ಆದರೆ ಹಲವು ವ್ಯಕ್ತಿಗಳು ಸಂಘಟಿತರಾಗಿ ಇಂದು ಬ್ರಹತ್ ಶಕ್ತಿಯಾಗಿ ಹೋರಾಟ ಮಾಡಬೇಕಿದೆ.
ಈ ದಿಶೆಯಲ್ಲಿ ರಾಜ್ಯದಲ್ಲಿ ಹಲವಾರು ಭ್ರಷ್ಟಾಚಾರ ವಿರೋಧಿ ಸಂಘ- ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ಎಲ್ಲ ಸಂಘ- ಸಂಸ್ಥೆಗಳು ಒಂದು ಒಕ್ಕೂಟವಾಗಿ ರಾಜ್ಯಾದ್ಯಂತ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ಒಂದು ಯೋಜನೆ ರೂಪಿಸ ಬೇಕು. ಎಲ್ಲ ಸದಸ್ಯರು ಮೊದಲು ತಾವು ಪಾರದರ್ಶಕತೆಗೆ ಪ್ರಾಧಾನ್ಯತೆ ನೀಡಬೇಕು.
ಈಗಾಗಲೇ ಹಲವಾರು ಭ್ರಷ್ಟಾಚಾರ ವಿರೋಧಿ ಸಂಘ ಸಂಸ್ಥೆಗಳು ಎಂದು ಹೇಳಿಕೊಂಡು ಅದರ ಸದಸ್ಯರೇ ಭ್ರಷ್ಟಾಚಾರದ ಹೆಸರಲ್ಲಿ ಬೆದರಿಕೆ ಹಾಕಿ ಕೀಳು ಕೆಲಸ ಮಾಡಿದ ಉದಾಹರಣೆಗಳು ಗಮನಾರ್ಹ. ಇಂತಹ ಘಟನೆಗಳು ಭ್ರಷ್ಟಾಚಾರ ವಿರೋಧಿ ಹೋರಾಟದ ಉದ್ದೇಶಕ್ಕೆ ಕೊಡಲಿ ಪೆಟ್ಟು ಕೊಡುತ್ತದೆ ಎನ್ನುವುದನ್ನು ಮರೆಯಬಾರದು.
ಭ್ರಷ್ಟಾಚಾರ ವಿರಾಟ್ ರೂಪ ತಾಳಿದೆ. ಇದನ್ನು ಹೀಗೆಯೇ ಬಿಟ್ಟರೆ ಇನ್ನೂ ಘೋರ ಹಂತ ತಲುಪುತ್ತದೆ. ಹೋರಾಟ ಅನಿವಾರ್ಯ. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತದೆ.
ಜನರು ಭ್ರಷ್ಟಾಚಾರ ಸಹಿಸದೇ ವಿರೋಧಿಸುವ ಮನೋಭಾವ ತಾಳುವದು ಈಗ ಅಗತ್ಯ. ಆಗ ಮಾತ್ರ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೆ ಮತ್ತು ಚಳುವಳಿಗೆ ನೂರಾನೆ ಬಲ ಬರುತ್ತದೆ. ಮನಸಿದ್ದರೆ ಮಾರ್ಗ, ಜನಶಕ್ತಿ ಮುಂದೆ ಯಾವ ಅನ್ಯಾಯವೂ ನಿಲ್ಲದು.