ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ಮಾಡದಂತೆ ವಕೀಲರಾದ ಕೆ.ಬಿ ನಾಯಕ್ ಅವರನ್ನು ಭಾರತೀಯ ವಕೀಲರ ಪರಿಷತ್ತು ಅಮಾನತು ಮಾಡಿದೆ.
ಬೆಳಗಾವಿಯ ವಕೀಲರಾದ ಬಸವರಾಜ ಜರಳಿ ಎಂಬುವರು ವಕೀಲ ಕೆ.ಬಿ ನಾಯಕ್ ಅವರ ವಿರುದ್ಧ ವೃತ್ತಿ ದುರ್ನಡತೆಗೆ ಸಂಬಂಧಿಸಿದಂತೆ ದೂರು ನೀಡಿದ್ದರು. ಈ ದೂರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಪರಿಗಣಿಸಿರಲಿಲ್ಲ.
ರಾಜ್ಯ ವಕೀಲರ ಪರಿಷತ್ತಿನ ಕ್ರಮ ಪ್ರಶ್ನಿಸಿ ಭಾರತೀಯ ವಕೀಲರ ಪರಿಷತ್ತಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಭಾರತೀಯ ವಕೀಲರ ಪರಿಷತ್ತಿನ ಮೂವರು ಸದಸ್ಯರ ಶಿಸ್ತುಪಾಲನಾ ಸಮಿತಿ ಕೆ.ಬಿ ನಾಯಕ್ ಅವರಿಗೆ ವಕೀಲಿಕೆ ಮಾಡದಂತೆ ನಿರ್ಬಂಧಿಸಿದೆ.
ವಕೀಲ ಕೆ.ಬಿ ನಾಯಕ್ ಅವರು ಅರ್ಜಿ ಇತ್ಯರ್ಥವಗುವವರೆಗೂ ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ಮಾಡದಂತೆ ನಿರ್ಬಂಧಿಸಲಾಗಿದೆ ಎಂದು ಬಿಸಿಐ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಹಾಗೆಯೇ ಆರೋಪಿಕ ವಕೀಲ ತಮ್ಮ ವಿರುದ್ಧದ ಆರೋಪಗಳಿಗೆ 4 ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ: ನ್ಯಾಯಾಂಗ ಬಂಧನದಲ್ಲಿದ್ದ ಸವದತ್ತಿಯ ಬವಸರೆಡ್ಡಿ ಎಂಬುವರಿಗೆ ವಕೀಲ ಕೆ.ಬಿ ನಾಯಕ್ ಅವರು ಸುಳ್ಳು ಮಾಹಿತಿ ನೀಡಿ ಅವರ ಜಮೀನಿನ ಜಿಪಿಎ ಪಡೆದಿದ್ದಾರೆ. ನಂತರ ಅಕ್ರಮವಾಗಿ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ವೃತ್ತಿ ದುರ್ನಡತೆ ತೋರಿದ್ದಾರೆ ಎಂದು ವಕೀಲ ಬಸವರಾಜ್ ಆರೋಪಿಸಿದ್ದರು.
ವೃತ್ತಿ ದುರ್ನಡತೆ ತೋರಿರುವ ವಕೀಲ ನಾಯಕ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿದ್ದರು. ಈ ದೂರಿಗೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್ತು ಸೂಕ್ತ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ದೂರುದಾರರು ಭಾರತೀಯ ವಕೀಲರ ಪರಿಷತ್ತಿಗೆ ಮೇಲ್ಮನವಿ ಸಲ್ಲಿಸಿದ್ದರು.