ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ ಎಂದು ನೂತನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರದಿಂದ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯಾರಂಭ ಮಾಡಿರುವ ನೂತನ ಸಿಜೆಗೆ ಇಂದು ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ಸ್ವಾಗತ ಸಮಾರಂಭ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದ ಸಿಜೆ ವರಾಳೆ, ಭಾಷೆ ಮತ್ತು ನೆಲದ ದೃಷ್ಟಿಯಿಂದ ತಾವು ಮಹಾರಾಷ್ಟ್ರದವರಾದರೂ ಒಂದಷ್ಟು ಕನ್ನಡವನ್ನು ತಿಳಿದಿದ್ದೇನೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಬಾಂಧವ್ಯ ಅನನ್ಯವಾದುದು ಎಂದರು.
ಅಲ್ಲದೇ, ಯಾರ ಹುಟ್ಟು ಕೂಡ ಅವರ ಕೈಯ್ಯಲ್ಲಿರುವುದಿಲ್ಲ. ನಾನು ವೃತ್ತಿಯಲ್ಲಿ ನಡೆದು ಬಂದ ಹಾದಿಯನ್ನು ಅವಲೋಕಿಸಿಕೊಂಡಾಗ ಆಶ್ಚರ್ಯವಾಗುತ್ತದೆ. ಔರಂಗಾಬಾದ್ ನನ್ನ ಜೀವನದ ದಿಕ್ಕು ಬದಲಿಸಿದ ಊರು. ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಂದಾಗಿ ನಾನು ಈ ಸ್ಥಾನದಲ್ಲಿ ನಿಂತಿದ್ದೇನೆ ಎಂದು ಸ್ಮರಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ ಸುಬ್ಬಾರೆಡ್ಡಿ ಮಾತನಾಡಿ ಕರ್ನಾಟಕ–ಮಹಾರಾಷ್ಟ್ರ ನಡುವೆ ಸೌಹಾರ್ದ ಸಂಬಂಧವಿದೆ. ಈ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಂತೆಯೇ ವರಾಳೆ ಅವರೂ ತಮ್ಮದೇ ಆದ ಛಾಪು ಮೂಡಿಸಲಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಅಡ್ವೊಕೇಟ್ ಪ್ರಭುಲಿಂಗ ನಾವದಗಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಂ ಕಾಶೀನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.