ಸಹೋದ್ಯೋಗಿಯೊಬ್ಬರಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹಿರಿಯ ನಾಗರಿಕರೊಬ್ಬರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಪೂರ್ಣಪ್ರಮಾಣದಲ್ಲಿ ಪರಿಗಣಿಸಲು ನಿರಾಕರಿಸಿದೆ.
ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ(ಐಸೆಕ್) ನಿರ್ದೇಶಕರಾಗಿದ್ದ ಡಾ.ಎಂ.ಜಿ ಚಂದ್ರಕಾಂತ್ ಹಾಗೂ ಸಹ ಪ್ರಾಧ್ಯಾಪಕ ಡಾ.ಎ.ವಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರದ್ ಗೋವಿಂದರಾಜು ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: 2019ರ ಜನವರಿ 4ರಂದು ಸಹಾಯಕ ಪ್ರಾಧ್ಯಾಪಕ ಡಾ. ಕೆ.ಬಿ ರಾಮಪ್ಪ ಎಂಬುವರು ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ, ತಾವು ಪರಿಶಿಷ್ಟ ಜಾತಿಗೆ ಸೇರಿದ್ದು ಗೊತ್ತಿದ್ದರೂ ಆರೋಪಿತರು ತಮ್ಮನ್ನು ಜಾತಿ ಹೆಸರಿಡಿದು ನಿಂದಿಸಿದ್ದಾರೆ ಮತ್ತು ತಾರತಮ್ಯ ಮಾಡಿದ್ದಾರೆ. 2016ರ ಡಿಸೆಂಬರ್ 26ರಿಂದ 2018ರ ಅಕ್ಟೋಬರ್ 14ರವರೆಗೆ ತಾನು ಇಂತಹ ಕಿರುಕುಳ ಎದುರಿಸಿದ್ದೇನೆ ಎಂದು ಆರೋಪಿಸಿದ್ದರು. .
ಅಲ್ಲದೇ, ಸಹ ಪ್ರಾಧ್ಯಾಪಕ ಡಾ.ಮಂಜುನಾಥ್ 2018ರ ಅಕ್ಟೋಬರ್ 12ರಂದು ಸಂಜೆ 6ಗಂಟೆಗೆ ನನ್ನ ಕಚೇರಿಗೆ ಬಂದು ಜಾತಿ ಹೆಸರಿಡಿದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದರು. ಈ ಕುರಿತಂತೆ 14ರಂದು ಸಂಸ್ಥೆ ಮುಖ್ಯಸ್ಥರಾದ ಡಾ. ಚಂದ್ರಕಾಂತ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇದಕ್ಕೂ ಮುನ್ನ ಡಾ.ಚಂದ್ರಕಾಂತ್ ಅವರು ಪಿಎಚ್ಡಿ ವಿದ್ಯಾರ್ಥಿಗಳ ಮುಂದೆ ಜಾತಿ ಹೆಸರಿಡಿದು ಅವಹೇಳನ ಮಾಡಿದ್ದರು. ”ಎಸ್ಸಿ ಮತ್ತು ಎಸ್ಟಿ ಜನ್ರು ಜೈಲಿಗೆ ಕಳಿಸ್ತಾರ, ಆದ್ರೆ ಮುಸಲ್ಮಾನ್ರು ಕೊಂದ್ ಬಿಡ್ತಾರೆ” ಎಂದಿದ್ದರು. ಈ ಮೂಲಕ ಡಾ. ಚಂದ್ರಕಾಂತ್ ಜಾತಿ ಮತ್ತು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಹೈಕೋರ್ಟ್ ತೀರ್ಪು: ದೂರುದಾರರ ಹೇಳಿಕೆ ಮೇರೆಗೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) 1989ರ ಸೆಕ್ಷನ್ 3(1)ಪಿ, 3(1)ಕ್ಯೂ ಹಾಗೂ 3(1)ಎಸ್ ಅಡಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ದೂರುದಾರರ ಆರೋಪಗಳನ್ನು ಪುಷ್ಟೀಕರಿಸುವ ಹಾಗೂ ಸೆಕ್ಷನ್ 3(1)ಪಿ, 3(1)ಕ್ಯೂ ಗಳ ಅಡಿ ಎಫ್ಐಆರ್ ದಾಖಲಿಸುವಂತಹ ಅಂಶಗಳು ಪ್ರಕರಣದಲ್ಲಿ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಡಾ.ಎ.ವಿ ಮಂಜುನಾಥ್ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಹಾಗೂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸೆಷನ್ಸ್ ಕೋರ್ಟ್ ಪ್ರಕ್ರಿಯೆಯನ್ನು ರದ್ದುಪಡಿಸಿದೆ.
ಇದೇ ವೇಳೆ ಡಾ. ಚಂದ್ರಕಾಂತ್ ಅವರ ವಿರುದ್ಧ ದಾಖಲಿಸಿರುವ ಸೆಕ್ಷನ್ 3(1)ಪಿ, 3(1)ಕ್ಯೂ ಗಳನ್ನು ರದ್ದುಪಡಿಸಿರುವ ಹೈಕೋರ್ಟ್, ಸೆಕ್ಷನ್ 3(1)ಎಸ್ (ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ) ಆರೋಪವನ್ನು ವಿಚಾರಣಾ ನ್ಯಾಯಾಲಯವೇ ನಿರ್ಧರಿಸುವ ಅಗತ್ಯವಿದೆ ಎಂದು ಹೇಳಿದೆ.
(CRL.P 419/2019)