ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಹೇಳಿಕೆ ದಾಖಲಿಸುವಾಗ ದೂರುದಾರ ಹಾಜರಿರುವ ಅನಿವಾರ್ಯತೆ ಇರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರರು ಹಾಜರಿರಲಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಾಗರಾಜ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಪಿ.ಎನ್ ದೇಸಾಯಿ ಅವರಿದ್ದ ಪೀಠ ಈ ಆದೇಶ ನೀಡಿದೆ.
ಇದೇ ವೇಳೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಸೂಚಿಸಿದೆ. ದೂರು ರದ್ದುಪಡಿಸಿದ ಹಂತದಿಂದಲೇ ಮತ್ತೆ ಪ್ರಕರಣವನ್ನು ವಿಚಾರಣೆ ನಡೆಸಿ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಸೂಚಿಸಿದೆ.
ತೀರ್ಪಿನಲ್ಲಿ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗೆ ದೂರುದಾರರು ಹಾಜರಾಗಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ಖುಲಾಸೆಗೊಳಿಸುವುದು ಸರಿಯಲ್ಲ. ಆರೋಪಿ ಹೇಳಿಕೆ ದಾಖಲಿಸಿಕೊಳ್ಳುವಾಗ ದೂರುದಾರರು ಖುದ್ದಾಗಿ ಹಾಜರಿರಬೇಕು ಎಂಬುದು ಕೂಡ ಅನಿವಾರ್ಯವಲ್ಲ. ಆರೋಪಿ ಹೇಳಿಕೆ ದಾಖಲಿಸಿಕೊಳ್ಳುವುದು ನ್ಯಾಯಾಲಯದ ಜವಾಬ್ದಾರಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು: ದೂರುದಾರ ನಾಗರಾಜ್ ಅವರಿಂದ ಈಶ್ವರ್ ಎಂಬುವರು ಲಕ್ಷ ಹಣ ಸಾಲವಾಗಿ ಪಡೆದಿದ್ದರು. ಹಣ ವಾಪಸ್ಸು ಮಾಡದ ಹಿನ್ನೆಲೆಯಲ್ಲಿ ಭದ್ರತೆಗಾಗಿ ನೀಡಿದ್ದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ನಾಗರಾಜ್ ಕೇಸ್ ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯಕ್ಕೆ ಆರೋಪಿ ಈಶ್ವರ್ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದ ಈಶ್ವರ್ ವಿಚಾರಣೆಗೂ ಹಾಜರಾಗಿದ್ದರು.
ನ್ಯಾಯಾಲಯ ಆರೋಪಿ ಹೇಳಿಕೆ ದಾಖಲಿಸುವ ವೇಳೆ ನಾಗರಾಜ್ ಹಾಜರಿರಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRIMINAL APPEAL NO.200033/2022)