ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒಮ್ಮತವಿಲ್ಲದ ತೀರ್ಪು ನೀಡಿದೆ.
ರಾಜ್ಯ ಸರ್ಕಾರದ ಆದೇಶ ಪುರಸ್ಕರಿಸಿದ್ದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದ ಇಬ್ಬರೂ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದ್ದಾರೆ. ನ್ಯಾ. ಹೇಮಂತ್ ಗುಪ್ತಾ ಹೈಕೋರ್ಟ್ ತೀರ್ಪು ಸರಿ ಎಂದಿದ್ದು, ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದಾರೆ.
ಇದೇ ವೇಳೆ ನ್ಯಾ. ಸುಧಾಂಶು ಧುಲಿಯಾ ಹೈಕೋರ್ಟ್ ತೀರ್ಪನ್ನು ವಜಾಗೊಳಿಸುವ ಮೂಲಕ ಸರ್ಕಾರ ಕ್ರಮವನ್ನು ತಿರಸ್ಕರಿಸಿದ್ದಾರೆ. ಇಬ್ಬರೂ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ಇದೀಗ ಮತ್ತೆ ಸಿಜೆಐ ಮುಂದೆ ಹೋಗಿದ್ದು, ಪ್ರಕರಣ ಮತ್ತೊಮ್ಮೆ ವಿಸ್ತ್ರುತ ಪೀಠದಲ್ಲಿ ವಿಚಾರಣೆಗೆ ಒಳಗಾಗಲಿದೆ.
ಹೈಕೋರ್ಟ್ ಕೂಡ ವಿಸ್ತ್ರುತ ಪೀಠ ರಚಿಸಿತ್ತು: ಶಿಕ್ಷಣ ಸಂಸ್ಥೆಗಳು ನಿರ್ಧರಿಸಿದ ಸಮವಸ್ತ್ರವನ್ನಷ್ಟೇ ವಿದ್ಯಾರ್ಥಿಗಳು ಧರಿಸಬೇಕು ಎಂಬ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಮತ್ತವರ ಪೋಷಕರು ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಪ್ರಕರಣವನ್ನು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಮೂರು ದಿನ ವಿಚಾರಣೆ ನಡೆಸಿತ್ತು.
ಪ್ರಕರಣದಲ್ಲಿ ನ್ಯಾಯವಾದಿಗಳು ಗಂಭೀರ ಸ್ವರೂಪದ ವಿವಾದಾಂಶಗಳು ಹಾಗೂ ಸರ್ಕಾರದ ಕ್ರಮದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ನ್ಯಾ. ದೀಕ್ಷಿತ್ ಪ್ರಕರಣವನ್ನು ಹೈಕೋರ್ಟ್ ಸಿಜೆ ಮುಂದಿಟ್ಟು ವಿಸ್ತ್ರುತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆ ಎಂದಿದ್ದರು. ಆ ಬಳಿಕ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ರಚಿಸಲಾಗಿತ್ತು. ಅಂತಿಮವಾಗಿ ಹೈಕೋರ್ಟ್ ಹಿಜಾಬ್ ನಿರ್ಬಂಧವನ್ನು ಎತ್ತಿಹಿಡಿದಿತ್ತು.
ಹಿನ್ನೆಲೆ: ಕಳೆದ ವರ್ಷಾರಂಭದಲ್ಲಿ ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ 6 ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಿಸದಂತೆ ಅಲ್ಲಿನ ಸಿಬ್ಬಂದಿ ತಡೆದಿದ್ದರು. ಈ ವೇಳೆ ಹಿಜಾಬ್ ವಿವಾದ ಆರಂಭವಾಗಿತ್ತಲ್ಲದೇ, ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಹಿಜಾಬ್ ಜತೆಗೆ ಕೇಸರಿ ಶಾಲು ಹಾಕಿ ಕಾಲೇಜಿಗೆ ವಿದ್ಯಾರ್ಥಿಗಳು ಬರಲಾರಂಭಿಸಿದ್ದರ. ಬಳಿಕ ಹಿಜಾಬ್ ನಿರ್ಬಂಧಿಸಿದ್ದ ಕಾಲೇಜಿನ ಕ್ರಮ ಹಾಗೂ ಶಿಕ್ಷಣ ಇಲಾಖೆ (ಸರ್ಕಾರ) ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿತ್ತು.
ಪ್ರಕರಣದ ಆರಂಭದಲ್ಲೇ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ತ್ರಿಸದಸ್ಯ ಪೀಠ, ನ್ಯಾಯಾಲಯ ನಿರ್ಧಾರ ಮಾಡುವವರೆಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರ ಧರಿಸಿ ಹೋಗುವಂತಿಲ್ಲ ಎಂದಿತ್ತು. ಅಂತಿಮ ತೀರ್ಪಿನಲ್ಲಿ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ 21 ವಕೀಲರು ಮತ್ತು ಪ್ರತಿವಾದಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.