ಮಿತಿಮೀರಿದ ವೇಗದಲ್ಲಿ ಬೆಳೆಯುತ್ತಿರುವ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಬಿಡಿಸಲಾಗದ ಕಗ್ಗಂಟಾಗಿ ಮಾರ್ಪಡುತ್ತಿದೆ. ಇದಕ್ಕೆ ನಾಯಕರ ದೂರದೃಷ್ಟಿಯ ಕೊರತೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರಣಗಳಿವೆ. ಅದರಾಚೆಗೂ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಿಸಲು ನೂರಾರು ಟ್ರಾಫಿಕ್ ಪೊಲೀಸರು ಮಳೆ, ಬಿಸಿಲು, ಹೊಗೆ ಲೆಕ್ಕಿಸದೆ ನಡುರಸ್ತೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ.
ಇದೇ ಹೊತ್ತಲ್ಲಿ ಒಂದಷ್ಟು ಪೊಲೀಸರು ಟೋಯಿಂಗ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ವಾಹನಗಳನ್ನು ಹೊತ್ತೊಯ್ಯುವುದೂ ಕಂಡು ಬರುತ್ತಿದೆ. ಇದು ಜನರಲ್ಲಿ ಟ್ರಾಫಿಕ್ ಪೊಲೀಸರ ಬಗ್ಗೆ ಕೀಳು ಭಾವನೆ ಬೆಳೆಸುತ್ತಿರುವ ಜತೆಗೆ ಅಸಹನೆಯನ್ನೂ ಮಡುಗಟ್ಟಿಸುತ್ತಿದೆ. ಹಾಗಿದ್ದರೆ ಪೊಲೀಸರ ಈ ಟೋಯಿಂಗ್ ಗೆ ಮಿತಿ ಇಲ್ಲವೇ. ಬೇಕಾಬಿಟ್ಟಿಯಾಗಿ ವಾಹನ ಹೊತ್ತೊಯ್ದಾಗ ವಾಹನದ ಮಾಲಿಕರಿಗಿರುವ ರಕ್ಷಣೆ ಏನು. ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಜನರ ಆರೋಪಗಳೇನು?: ನಗರದ ಬಹುತೇಕ ಕಡೆ ಮಾರುಕಟ್ಟೆಗೆ, ಹೋಟೆಲ್ಲಿಗೆ, ಮೆಡಿಕಲ್ ಶಾಪಿಗೆ ಅಥವಾ ಬೇರಾವುದೇ ಕಚೇರಿಗೆ ಹೋದ ಸಂದರ್ಭದಲ್ಲಿ ಪಾರ್ಕಿಂಗ್ ಗೆ ಜಾಗವೇ ಇರುವುದಿಲ್ಲ. ಹೀಗಾಗಿ ಒಂದೆರಡು ನಿಮಿಷಗಳ ಕಾಲ ಖಾಲಿ ಇದ್ದ ಜಾಗದಲ್ಲಿ ಪಾರ್ಕಿಂಗ್ ಮಾಡಿರುತ್ತೇವೆ. ಈ ವೇಳೆ ಸದ್ದಿಲ್ಲದೇ ಬರುವ ಟೋಯಿಂಗ್ ಸಿಬ್ಬಂದಿ ವಾಹನ ಹೊತ್ತೊಯ್ಯುತ್ತಾರೆ. ಕೆಲ ಬಾರಿ ವಾಹನಗಳಿಗೆ ಹಾನಿಯನ್ನೂ ಮಾಡುತ್ತಾರೆ. ಇವನ್ನೆಲ್ಲಾ ಕೇಳಿದರೆ ಜೈಲಿಗೆ ಅಟ್ಟುವುದಾಗಿ ಗದರುತ್ತಾರೆ. ದಂಡ ಕಟ್ಟಿಸಿಕೊಂಡರೂ ರಸೀದಿ ಕೊಡುವುದಿಲ್ಲ. ಹಣಕ್ಕೆ/ಲಂಚಕ್ಕೆ ಚೌಕಾಸಿ ಮಾಡುತ್ತಾರೆ ಎಂಬುದು ಸೇರಿದಂತೆ ಜನರ ಬಳಿ ಆರೋಪಗಳ ದೊಡ್ಡ ಪಟ್ಟಿಯೇ ಇದೆ.
ಟೋಯಿಂಗ್ ಪ್ರಕ್ರಿಯೆಗೆ ಶಾಸನಬದ್ಧ ನಿಮಯಗಳೇ ಇಲ್ಲ!
ಸದ್ದಿಲ್ಲದೇ ವಾಹನ ಹೊತ್ತೊಯ್ಯುವ ಪೊಲೀಸರು ಜನ ಪ್ರಶ್ನಿಸಿದಾಗ ಇನ್ನಿಲ್ಲದ ಕಾನೂನು ಮಾತಾಡುತ್ತಾರೆ. ಆದರೆ, ವಾಸ್ತವದಲ್ಲಿ ಟೋಯಿಂಗ್ ಗೆ ಶಾಸನಾತ್ಮಕ ಕಾನೂನುಗಳೇ ಇಲ್ಲ. ರೂಲ್ಸ್ ಆಫ್ ದಿ ರೋಡ್ ರೆಗ್ಯೂಲೇಷನ್-1989 ಕಾಯ್ದೆಯ ಸೆಕ್ಷನ್ 15 ವಾಹನಗಳನ್ನು ಎಲ್ಲೆಲ್ಲಿ ಪಾರ್ಕ್ ಮಾಡಬಾರದು ಎಂಬುದನ್ನ ಹೇಳುತ್ತದೆ.
ಸೆಕ್ಷನ್ 15 ಹೇಳುವುದೇನು?: ರಸ್ತೆ ಬದಿ ಪಾರ್ಕಿಂಗ್ ಸೂಚನಾ ಫಲಕ ಇರುವಲ್ಲಿ ಮಾತ್ರ ವಾಹನ ನಿಲ್ಲಿಸಬೇಕು. ರೋಡ್ ಕ್ರಾಸಿಂಗ್, ಹಂಪ್ಸ್, ಕಾಲುದಾರಿ, ಟ್ರಾಫಿಕ್ ಲೈಟ್, ಮುಖ್ಯ ರಸ್ತೆ, ಇನ್ನೊಂದು ವಾಹನದ ಎದುರು ಅಥವಾ ವಾಹನಕ್ಕೆ ಅಡ್ಡಿಯಾಗಿ, ಇನ್ನೊಂದು ವಾಹನದ ಜೊತೆ, ಬಸ್ ನಿಲ್ದಾಣದ ಹತ್ತಿರ, ಶಾಲೆ-ಆಸ್ಪತ್ರೆಯ ಪ್ರವೇಶದ್ವಾರ, ರಸ್ತೆಯ ವಿರುದ್ಧ ದಿಕ್ಕಿನಲ್ಲಿ, ಪಾರ್ಕಿಂಗ್ ನಿಷೇಧಿಸಿರುವಲ್ಲಿ, ಫುಟ್ ಪಾತ್ ಅಂಚಿನಿಂದ ದೂರದಲ್ಲಿ ಪಾರ್ಕಿಂಗ್ ಮಾಡಬಾರದು ಎನ್ನುತ್ತದೆ.
ಇದೇ ಕಾಯ್ದೆಯ ಸೆಕ್ಷನ್ 20 ವಾಹನವನ್ನು ಹೇಗೆ ಸುರಕ್ಷಿತವಾಗಿ ಟೋಯಿಂಗ್ ಮಾಡಬೇಕು ಎಂಬುದನ್ನು ಹೇಳುತ್ತದೆ. ಆದರೆ, ಟೋಯಿಂಗ್ ಮಾಡುವ ಮುನ್ನ ಅನುಸರಿಸಬೇಕಾದ ನಿಯಮಗಳ ಕುರಿತು ಹೇಳುವುದಿಲ್ಲ. ಹೀಗಾಗಿ ಟೋಯಿಂಗ್ ಗೆ ಶಾಸನಾತ್ಮಕ ನಿಯಮಗಳೇ ಇಲ್ಲ. ದಿ ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆ್ಯಕ್ಟ್ ನಲ್ಲಿಯೂ ಟೋಯಿಂಗ್ ಪಾಲಿಸುವ ನಿಯಮಗಳಿಲ್ಲ. ಟೋಯಿಂಗ್ ಗೆ ಶಾಸನಾತ್ಮಕ ನಿಯಮಗಳು ಇಲ್ಲದಿರುವುದರಿಂದ ಪೊಲೀಸರೇ ಟೋಯಿಂಗ್ ಗೆ ಕೆಲ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ.
ಪೊಲೀಸರ ಟೋಯಿಂಗ್ ಮಾರ್ಗಸೂಚಿ: ಟೋಯಿಂಗ್ ವಾಹನದಲ್ಲಿ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಇದ್ದು ಮೇಲುಸ್ತುವಾರಿ ವಹಿಸಿಕೊಳ್ಳಬೇಕು. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದ್ದಾಗ ಮೊದಲಿಗೆ ಫೋಟೋ/ವಿಡಿಯೋ ಮಾಡಿಕೊಳ್ಳಬೇಕು. ವಾಹನದ ನಂಬರ್, ಮಾಡೆಲ್, ಬಣ್ಣಗಳ ವಿವರವನ್ನು ಧ್ವನಿವರ್ಧಕದ ಮೂಲಕ ಘೋಷಣೆ ಮಾಡಬೇಕು. 5 ನಿಮಿಷ ಕಾಯುವ ಮೂಲಕ ವಾಹನದ ಮಾಲಿಕನಿಗೆ ಸಮಯಾವಕಾಶ ನೀಡಬೇಕು. ಮಾಲಿಕ ಕೂಡಲೇ ಬಂದಲ್ಲಿ, ನೋ ಪಾರ್ಕಿಂಗ್ ದಂಡ ಪಡೆದು ವಾಹನ ಬಿಡಬೇಕು. ಎತ್ತಿಕೊಂಡು ಹೋಗುವ ಸಂದರ್ಭದಲ್ಲಿ ಬಂದರೂ ದಂಡ ಪಡೆದು ವಾಹನ ಹಿಂದಿರುಗಿಸಬೇಕು ವಾಹನ ಎತ್ತಿಕೊಂಡು ಹೋದ ನಂತರ ಸುರಕ್ಷಿತವಾಗಿ ನಿಲುಗಡೆ ಮಾಡಿರಬೇಕು. ಮಾಲಿಕ ಬಂದಾಗ ದಂಡದ ಹಣ ಪಡೆದು ವಾಹನ ಬಿಡುಗಡೆ ಮಾಡಬೇಕು.
ವಾಹನದ ಮಾಲಿಕರಿಗಿರುವ ಪರಿಹಾರಗಳೇನು?: ತಿಳಿಯದೇ ಪಾರ್ಕಿಂಗ್ ಅಲ್ಲದ ಜಾಗದಲ್ಲಿ ವಾಹನ ನಿಲ್ಲಿಸಿದ್ದಾಗ ಕೂಡಲೇ ಅಧಿಕಾರಿಗೆ ಮನವಿ ಮಾಡಬಹುದು. ಧ್ವನಿವರ್ಧಕದ ಮೂಲಕ ಘೋಷಣೆ ಮಾಡದೆ/ಸಮಯಾವಕಾಶ ನೀಡದೆ ವಾಹನ ಹೊತ್ತೊಯ್ದರೆ ಟೋಯಿಂಗ್ ಮಾಡಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬಹುದು. ಠಾಣಾಧಿಕಾರಿಯಿಂದ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಹಿರಿಯ ಪೊಲೀಸ್ ಅಧಿಕಾರಿ/ಆಯುಕ್ತರಿಗೆ ದೂರು ನೀಡಬಹುದು. ಅಧಿಕಾರ ದುರ್ಬಳಕೆ ಮಾಡಿದರೆ/ವಾಹನಗಳಿಗೆ ಹಾನಿ ಉಂಟು ಮಾಡಿದರೆ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.
ಲೇಖನ: ಮಲ್ಲಿಕಾರ್ಜುನ್ ಹೊನ್ನಾಳಿ, 9845051233