ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರವನ್ನೇ ಧರಿಸಿ ಶಾಲೆ-ಕಾಲೇಜಿಗೆ ಬರಬೇಕು ಎಂದು ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿತ್ತು.
ರಾಜ್ಯ ಸರ್ಕಾರ ಹೊರಡಿಸಿದ್ದ ಈ ಆದೇಶ ರದ್ದುಕೋರಿ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರು ಮತ್ತವರ ಪೋಷಕರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿತ್ತು.
2022 ಮಾರ್ಚ್ 15ರ ಬೆಳಗ್ಗೆ 10.35ಕ್ಕೆ ಹೈಕೋರ್ಟ್ ಪೂರ್ಣ ಪೀಠ ಪ್ರಕರಣದ ತೀರ್ಪು ಪ್ರಕಟಿಸಿತ್ತು. ಈ ವೇಳೆ ತೀರ್ಪಿನ ಪ್ರಮುಖ ಭಾಗವನ್ನಷ್ಟೇ ಉಲ್ಲೇಖಿಸಿದ್ದ ಪೀಠ, ನಾವು ಪ್ರಕರಣದಲ್ಲಿ ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೆವು. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಾಗ ಸರ್ಕಾರದ ಆದೇಶ ಹಾಗೂ ಶಿಕ್ಷಣ ಸಂಸ್ಥೆಗಳ ಸಮವಸ್ತ್ರ ಸಂಹಿತೆ ಜಾರಿ ವೇಳೆ ಅರ್ಜಿದಾರರ ಯಾವ ಹಕ್ಕುಗಳು ಉಲ್ಲಂಘನೆಯಾಗಿಲ್ಲ. ಹೀಗಾಗಿ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ ಎಂದು ತೀರ್ಪು ನೀಡಿತ್ತು.
ಪ್ರಕರಣದಲ್ಲಿ ಹೈಕೋರ್ಟ್ ಪರಿಗಣಿಸಿದ ನಾಲ್ಕು ಅಂಶಗಳ ಸಾರಾಂಶ
1) ಸಂವಿಧಾನದ ವಿಧಿ 25ರ ಅಡಿ ರಕ್ಷಿಸಲ್ಪಟ್ಟಿದೆ ಎನ್ನಲಾದ ಹಾಗೂ ಇಸ್ಲಾಂನ ನಂಬಿಕೆಯಂತೆ ಹಿಜಾಬ್ ಅಥವಾ ಸ್ಕಾರ್ಫ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆಯೇ?
ಉತ್ತರ: ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ. ಇಸ್ಲಾಂ ನಂಬಿಕೆಯಂತೆ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ.
2) ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಗದಿ ಮಾಡಿರುವುದು ಸಂವಿಧಾನದ ವಿಧಿ 19(1)(ಎ) ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ವಿಧಿ 21ರ ಅಡಿ ನೀಡಲಾಗಿರುವ ಖಾಸಗಿ ಹಕ್ಕನ್ನು ನಿರ್ಬಂಧಿಸಲಿದೆಯೇ?
ಉತ್ತರ: ನಮ್ಮ ಅಭಿಪ್ರಾಯದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಗದಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ. ಕೆಲವೊಂದು ವಿಚಾರಗಳಲ್ಲಿ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಲು ಸರ್ಕಾರಕ್ಕೆ ಸಾಂವಿಧಾನಿಕ ಹಕ್ಕಿದೆ. ಇದನ್ನು ವಿದ್ಯಾರ್ಥಿಗಳು ಆಕ್ಷೇಪಿಸಲಾಗದು.
3) ರಾಜ್ಯ ಸರ್ಕಾರ 2022ರ ಫೆಬ್ರವರಿ 5ರಂದು ಸಮವಸ್ತ್ರ ಸಂಹಿತೆ ನಿಗದಿಪಡಿಸುವ ಸಂಬಂಧ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿ ಹೊರಡಿಸಿರುವ ಆದೇಶ ನಿಯಮಬಾಹಿರವೇ ಹಾಗೂ ಇದು ಸಂವಿಧಾನದ ವಿಧಿ 14 ಮತ್ತು 15ನ್ನು ಉಲ್ಲಂಘಿಸಲಿದೆಯೇ?
ಉತ್ತರ: ಸಮವಸ್ತ್ರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಅದರಂತೆ 2022ರ ಫೆ.5ರ ಸರ್ಕಾರದ ಆದೇಶವನ್ನು ಅಂಸಿಧುಗೊಳಿಸುವ ಯಾವುದೇ ಕಾನೂನಾತ್ಮಕ ಅಂಶಗಳಿಲ್ಲ.
4) ಉಡುಪಿ ಕಾಲೇಜಿನಲ್ಲಿ ಸಮವಸ್ತ್ರ ನಿಗದಿ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿರುವ ಕ್ರಮದಲ್ಲಿ ಕಾಲೇಜಿಗೆ ನಿರ್ದೇಶನ ನೀಡುವ ಅಗತ್ಯವಿದೆಯೇ?
ಉತ್ತರ: ಶಿಕ್ಷಣ ಸಂಸ್ಥೆಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿ ಹಾಗೂ ಸಮವಸ್ತ್ರ ಸಂಹಿತೆ ಹೇರದಂತೆ ನಿರ್ದೇಶನ ಕೋರಿರುವ ಮನವಿಯನ್ನು ಪರಿಗಣಿಸಲಾಗದು. ಹೀಗಾಗಿ ಕಾಲೇಜಿನ ವಿರುದ್ಧ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ.
ಸಂಕ್ಷಿಪ್ತ ತೀರ್ಪು ಕೇಳಲು ಈ ಕೆಳಗಿನ ಲಿಂಕ್ ಬಳಸಿ
https://www.youtube.com/watch?v=DgF9ZOEVAaM