News

ನ್ಯಾಯಾಂಗ ಟೀಕಿಸಿದ ಸ್ಪೀಕರ್: ಎಎಬಿ ಮಾಜಿ ಅಧ್ಯಕ್ಷರಿಂದ ಖಂಡನೆ

Share It

‘ನ್ಯಾಯಾಂಗ ವ್ಯವಸ್ಥೆಯೇನು ಆದರ್ಶದ ತುತ್ತ ತುದಿಯಲ್ಲಿದೆಯೇ? ಎಂಬ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಟೀಕೆಗೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಗೇರಿ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಎಎಬಿ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ‘ದೇಶದಲ್ಲಿ ಇಂದು ಜನರಿಗೆ ಯಾವುದಾದರೂ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದು ಎಂದರೆ ಅದು ನ್ಯಾಯಾಂಗದ ಮೇಲೆ ಮಾತ್ರ. ಕೊರೊನಾ ಸಂದರ್ಭದಲ್ಲಿ ಆಮ್ಲಜನಕ ಪೂರೈಕೆ ಮಾಡಲು ಮೀನಮೇಷ ಎಣಿಸುತ್ತಿದ್ದ ಸರ್ಕಾರದ ಜಡತ್ವಕ್ಕೆ ಪೆಟ್ಟು ಕೊಟ್ಟು ದೇಶದ ಜನರಿಗೆ ಆಮ್ಲಜನಕ ನೀಡಿದ್ದು ನ್ಯಾಯಾಂಗ.’

‘ಆಳುವ ಸರ್ಕಾರದ ವೈಫಲ್ಯಗಳನ್ನು ಪ್ರಶ್ನೆ ಮಾಡುವವರನ್ನು ಜೈಲಿಗೆ ಕಳುಹಿಸುವ ಕ್ರಿಯೆಗೆ ಅಡ್ಡವಾಗಿ ನಿಂತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇರುವುದು ನ್ಯಾಯಾಂಗ. ದೇಶದ್ರೋಹ ಪ್ರಕರಣಗಳನ್ನು ಪ್ರಬಲ ಅಸ್ತ್ರವಾಗಿ ಬಳಸುತ್ತಿದ್ದ ನಿರಂಕುಶ ಪ್ರಭುತ್ವದತ್ತ ಸಾಗುತ್ತಿರುವ ಸರ್ಕಾರಕ್ಕೆ ಅಂಕುಶ ಹಾಕಿದ್ದು ಸುಪ್ರೀಂಕೋರ್ಟ್.’

‘ಬಹುಶಃ ಸಭಾಧ್ಯಕ್ಷರಾದ ಕಾಗೇರಿ ಅವರು ತಮ್ಮ ಪಕ್ಷದ ಮೇರು ನಾಯಕರು ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಮಾಡುತ್ತಿರುವ ಗೌಪ್ಯ ಪ್ರಯತ್ನಕ್ಕೆ ಪೂರಕವಾಗಿ ನ್ಯಾಯಾಂಗದ ಘನತೆ ಗೌರವದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ತಂತ್ರವಾಗಿ ಈ ಹೇಳಿಕೆ ನೀಡಿದ್ದಾರೆ ಎಂದೆನ್ನಿಸುತ್ತಿದೆ’ ಎಂದು ಎ.ಪಿ ರಂಗನಾಥ್ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿರುವ ವಿಧಾನಸಭಾಧ್ಯಕ್ಷರ ಹೇಳಿಕೆಯನ್ನು ಖಂಡಿಸಿದ್ದಾರೆ.

ಅಲ್ಲದೇ, ‘ಕಾಗೇರಿ ಅವರು ನ್ಯಾಯಾಂಗದ ಮೇಲೆ ಬೆರಳು ತೋರುವ ಮುನ್ನ ಅವರೇ ಒಪ್ಪಿಕೊಂಡಂತೆ ಅವರ ಪಕ್ಷದ ಭ್ರಷ್ಟಾಚಾರ, ಶಾಸಕರ ಖರೀದಿಯಂತಹ ಪ್ರಜಾಪ್ರಭುತ್ವ ವಿರೋಧಿ ನಡಾವಳಿಗಳನ್ನು ಖಂಡಿಸಲಿ’ ಎಂದು ಸಲಹೆ ನೀಡಿದ್ದಾರೆ.

ಸ್ಪೀಕರ್ ಕಾಗೇರಿ ಹೇಳಿದ್ದೇನು: ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಕುರಿತ ಕಾರ್ಯಕ್ರಮದಲ್ಲಿ ಮಾತಮಾಡಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ‘ನ್ಯಾಯಾಂಗ ವ್ಯವಸ್ಥೆಯೇನು ಆದರ್ಶದ ತುತ್ತ ತುದಿಯಲ್ಲಿದೆಯೇ? ಭ್ರಷ್ಟಾಚಾರ, ವಿಳಂಬ ಇಲ್ಲವೇ? ನ್ಯಾಯಾಲಯಗಳಲ್ಲಿ ನಿರ್ಣಯ ಸಿಗುತ್ತದೆಯೇ ಹೊರತು ನ್ಯಾಯ ಸಿಗುತ್ತಿಲ್ಲ ಎಂದಿದ್ದರು.’ ಇದೇ ವೇಳೆ ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗದ ನಡವಳಿಕೆಗಳನ್ನೂ ಟೀಕಿಸಿದ್ದರು.


Share It

You cannot copy content of this page