ಹೈಕೋರ್ಟ್ ಲೈವ್ ಸ್ಟ್ರೀಮಿಂಗ್ ವಿಡಿಯೋಗಳನ್ನು ಬಳಸದಂತೆ ಹಾಗೂ ಈ ಕೂಡಲೇ ಬಳಕೆ ಮಾಡಿರುವ ವಿಡಿಯೋಗಳನ್ನು ತೆಗೆಯುವಂತೆ ಹೈಕೋರ್ಟ್ ಎಲ್ಲ ಮಾಧ್ಯಮಗಳಿಗೆ ಸೂಚಿಸಿದೆ.
ಹೈಕೋರ್ಟ್ ಕಲಾಪದ ವಿಡಿಯೋಗಳನ್ನು ಪ್ರಸಾರ ಮಾಡಿರುವ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ಗಳಿಗೆ ವಿಡಿಯೋ ಕ್ಲಿಪಿಂಗ್ಸ್ ಗಳನ್ನು ಡಿಲೀಟ್ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಇಂತಹ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಕಾರ್ಪ್‌ಗಳಿಗೂ ಸೂಚಿಸಿರುವ ಹೈಕೋರ್ಟ್, ಯಾವುದೇ ಖಾಸಗಿ ವೇದಿಕೆಗಳು ಹೈಕೋರ್ಟ್‌ನ ಲೈವ್‌ಸ್ಟ್ರೀಮ್ ವಿಡಿಯೊಗಳನ್ನು ಬಳಸಕೂಡದು ಎಂದು ಎಚ್ಚರಿಕೆ ನೀಡಿದೆ.
ಹಣ ಗಳಿಕೆ ಉದ್ದೇಶದಿಂದ ಹೈಕೋರ್ಟ್‌ನ ಲೈವ್ ಸ್ಟ್ರೀಮ್ ವಿಡಿಯೋಗಳನ್ನು ಮನಬಂದಂತೆ ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಎಎಬಿ ಪರ ಹಾಜರಿದ್ದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಹೈಕೋರ್ಟ್ ಕಲಾಪದ ವಿಡಿಯೊಗಳನ್ನು ಹಣ ಗಳಿಕೆಗಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಲವು ಡಿಜಿಟಲ್ ವೇದಿಕೆಗಳು ಮನಬಂದಂತತೆ ಎಡಿಟ್ ಮಾಡಿ ಪ್ರಸಾರ ಮಾಡುತ್ತಿವೆ. ಈ ವೇದಿಕೆಯಲ್ಲಿ ಪ್ರಸಾರವಾಗಿರುವ ವಿಡಿಯೊಗಳಿಗೆ ಕೆಲವರು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ನ್ಯಾಯಮೂರ್ತಿಗಳು ಮತ್ತು ವಕೀಲರು ಎನ್ನದೇ ಅಸಭ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದು ನ್ಯಾಯಾಂಗ ನಿಂದನೆಯಾಗಿದೆ. ಈ ವಿಡಿಯೊಗಳನ್ನು ತೆಗೆದು ಹಾಕಲು ನಿರ್ದೇಶಿಸಬೇಕು. ಇಂಥ ವೇದಿಕೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಕಾರ್ಪ್, ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.