News

ಎದುರು ಪಕ್ಷಗಾರರಿಗೆ ನೋಟಿಸ್ ನೀಡದೆ ವಿಚಾರಣಾ ದಿನಾಂಕವನ್ನು ಬದಲಿಸುವಂತಿಲ್ಲ: ಸುಪ್ರೀಂಕೋರ್ಟ್

Share It

ಎದುರು ಪಕ್ಷಗಾರರಿಗೆ ನೋಟಿಸ್ ನೀಡದೇ ಪ್ರಕರಣದ ವಿಚಾರಣಾ ದಿನಾಂಕವನ್ನು ನ್ಯಾಯಾಲಯಗಳು ಬದಲಿಸಲು ಅಥವಾ ಹಿಂದಕ್ಕೆ ಹಾಕಿಕೊಳ್ಳಲು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೇ, ಪ್ರಕರಣವೊಂದರಲ್ಲಿ ಎದುರು ಪಕ್ಷಗಾರನಿಗೆ ನೋಟಿಸ್ ನೀಡದೇ, ವಿಚಾರಣೆ ನಡೆಸಿ ಎಕ್ಸ್ ಪಾರ್ಟಿ ಆಧಾರದಲ್ಲಿ ಆದೇಶ ಹೊರಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

ಉತ್ತರಾಖಂಡ ರಾಜ್ಯದ ವಿಚಾರಣಾ ನ್ಯಾಯಾಲಯ ಆಸ್ತಿಯೊಂದರ ವಿವಾದಕ್ಕೆ ಸಂಬಂಧಿಸಿದಂತೆ ವಾದ ಆಲಿಸಲು 2002ರ ಮೇ 30ಕ್ಕೆ ದಿನಾಂಕ ನಿಗದಿಪಡಿಸಿತ್ತು. ಈ ನಿಗದಿತ ದಿನಾಂಕಕ್ಕಿಂತ ಮೊದಲೇ ಮೇ 3ರಂದು ಅರ್ಜಿದಾರರ ಪರ ವಕೀಲರು ಪ್ರಕರಣವನ್ನು ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಮೇ 3ರಂದೇ ವಾದ ಆಲಿಸಿ, ಏಪ್ರಿಲ್ 22ರಂದು ಆದೇಶ ಪ್ರಕಟಿಸಿತ್ತು.

ಮೇ 30, 2002ರಂದು ಪ್ರತಿವಾದಿ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಮೇ 3ರಂದು ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಕೋರಿದ್ದರು. ಆದರೆ, ಪ್ರತಿವಾದಿಗಳು ಅರ್ಜಿಗೆ ಆಕ್ಷೇಪಣೆಯನ್ನೂ ಸಲ್ಲಿಸದೇ ಇದ್ದುದರಿಂದ ನ್ಯಾಯಾಲಯ ಎಕ್ಸ್ ಪಾರ್ಟಿ ಆದೇಶ ಮಾಡಿರುವುದನ್ನು ಸಮರ್ಥಿಸಿಕೊಂಡಿತ್ತು. ಆ ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತಾದರೂ, ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವೆಂದು ಅಬಿಪ್ರಾಯಪಟ್ಟು ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಸಿವಿಲ್ ಮೇಲ್ಮನವಿ ಆಲಿಸಿದ ನ್ಯಾ. ಅಭಯ್ ಶ್ರೀನಿವಾಸ್ ಓಕ, ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ನ್ಯಾ. ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ, ಮೇಲ್ಮನವಿದಾರರಿಗೆ ವಾದ ಮಂಡಿಸಲು ಅವಕಾಶ ನೀಡದೇ, ಅವರ ವಿರುದ್ಧ ಹೊರಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಅಲ್ಲದೇ, ಎದುರು ಪಕ್ಷಗಾರರಿಗೆ ನೋಟಿಸ್ ನೀಡದೆ ನ್ಯಾಯಾಲಯಗಳು ವಿಚಾರಣೆಯ ದಿನಾಂಕವನ್ನು ಹಿಂದಕ್ಕೆ ಹಾಕಲು ಅಥವಾ ಬದಲಿಸಲು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಅದು ನಿಸರ್ಗ ಸಹಜ ನ್ಯಾಯದ ಉಲ್ಲಂಘನೆಯಾಗುತ್ತದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಅರ್ಜಿದಾರರ ಕೋರಿಕೆ ಮೇರೆಗೆ ಮೇ 30ರ ಬದಲಿಗೆ ಮೇ 3ರಂದೇ ಅರ್ಜಿ ವಿಚಾರಣೆ ನಡೆಸಿದೆ. ಒಂದೊಮ್ಮೆ ನ್ಯಾಯಾಲಯ ಮೇ 30ರಂದೇ ಪ್ರಕರಣದ ವಿಚಾರಣೆ ನಡೆಸಿದ್ದರೆ, ಅಂದು ಮೇಲ್ಮನವಿದಾರರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿತ್ತು. ಇನ್ನು ಮೇ 30ರಂದು ಮೇಲ್ಮನವಿದಾರರು ಹಾಜರಾಗಿ ಆದೇಶ ಹಿಂಪಡೆಯುವಂತೆ ಕೋರಿದ್ದರೂ ಅದನ್ನು ಪರಿಗಣಿಸದೇ ಇರುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದೇ ವೇಳೆ ಏಪ್ರಿಲ್ 22ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.

(CIVIL APPEAL NO.2394/2023)


Share It

You cannot copy content of this page