ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶಿಸಿದೆ. ಕೋರ್ಟ್ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಿಸಿ ಎಂದು ಕೋರ್ಟ್ ಆದೇಶ ನೀಡಿದ ಮೇರೆಗೆ ಇದೀಗ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 166 (ಸರ್ಕಾರಿ ಸೇವಕನಿಂದ ಕಾನೂನು ಉಲ್ಲಂಘನೆ), 403 (ಅಪ್ರಾಮಾಣಿಕವಾಗಿ ಆಸ್ತಿ ದುರ್ಬಳಕೆ), 406(ಅಪರಾಧಿಕ ನಂಬಿಕೆ ದ್ರೋಹ), 420 (ವಂಚನೆ), 426 (ಕಿಡಿಗೇಡಿತನಕ್ಕೆ ಶಿಕ್ಷೆ), 465 (ಪೋರ್ಜರಿ), 468 (ಪೋರ್ಜರಿ ಮಾಡಿದ್ದಕ್ಕೆ ಶಿಕ್ಷೆ), 340 (ಅಕ್ರಮ ಬಂಧನ), 351 (ಇತರರಿಗೆ ಹಾನಿ ಮಾಡುವುದು).
ಸಿಎಂ ಸಿದ್ದರಾಮಯ್ಯ 1ನೇ ಆರೋಪಿಯಾಗಿದ್ದರೆ, ಪತ್ನಿ ಪಾರ್ವತಿ 2ನೇ ಆರೋಪಿಯಾಗಿದ್ದಾರೆ. ಇನ್ನು ಬಾಮೈದ ಮಲ್ಲಿಕಾರ್ಜುನ 3 ನೇ ಆರೋಪಿಯಾಗಿದ್ದಾರೆ. ದೇವರಾಜು ಎಂಬುವರನ್ನು 4ನೇ ಆರೋಪಿಯಾಗಿಸಿರುವ ಲೋಕಾಯುಕ್ತ ಪೊಲೀಸರು ಹಾಗೂ ಎ5 ಅಡಿಯಲ್ಲಿ ಇತರರು ಆರೋಪಿತರೆಂದು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.