ಬೆಂಗಳೂರು: ಕುಟುಂಬದ ವ್ಯಾಖ್ಯಾನದಲ್ಲಿ ನಿರ್ದಿಷ್ಟ ಸಂಬಂಧಿಕರನ್ನು ಮಾತ್ರ ಸೇರಿಸಲಾಗಿದೆ. ಇದರಲ್ಲಿ ಸೊಸೆಯನ್ನು ಉಲ್ಲೇಖಿಸಿಲ್ಲ. ಆದ್ದರಿಂದ, ಸೊಸೆಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಿ ಎಂದು ನಿರ್ದೇಶಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಕೋರಿ ಬಾಗಲಕೋಟೆಯ ಪ್ರಿಯಾಂಕ ಹುಲಮನಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ‘ಕಾನೂನು ನಿರೂಪಕರು ಶಾಸನ ರೂಪಿಸುವಾಗ ‘ಕುಟುಂಬ’ದ ವ್ಯಾಖ್ಯಾನದಲ್ಲಿ ಉದ್ಯೋಗಿಯ ನಿರ್ದಿಷ್ಟ ಸಂಬಂಧಿಕರನ್ನು ಸೇರಿಸಿದ್ದಾರೆ. ಈ ವೇಳೆ ಸೊಸೆಯನ್ನು ಕುಟುಂಬದ ವ್ಯಾಖ್ಯಾನದಲ್ಲಿ ಸೇರಿಸಿಲ್ಲ. ಸೊಸೆಗೆ ಅನುಕುಂಪದ ಹುದ್ದೆ ನೀಡುವ ಸಲುವಾಗಿ ಕುಟುಂಬದ ವ್ಯಾಖ್ಯಾನವನ್ನು ವಿಸ್ತರಿಸಿ ಎಂದು ಅರ್ಜಿದಾರರು ಕೋರುವುದನ್ನು ಒಪ್ಪಲಾಗದು. ಜತೆಗೆ ಶಾಸನದ ಅರ್ಥವನ್ನು ನ್ಯಾಯಾಂಗ ವಿಸ್ತರಣೆ ಮಾಡುವುದು ಸೂಕ್ತವಲ್ಲ’ ಎಂದು ಹೇಳಿದೆ.
ಅಲ್ಲದೆ, ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಉದ್ದೇಶಕ್ಕೆ ಸಂಬಂಧಿಸಿದಂತೆ ಶಾಸನಕಾರರು ಕಾಯ್ದೆ ರೂಪಿಸಿದ್ದಾರೆ. ನ್ಯಾಯಾಲಯ ಅದರ ಅರ್ಥವ್ಯಾಪ್ತಿಯನ್ನು ವಿಸ್ತರಿಸಲಾಗದು ಮತ್ತು ನ್ಯಾಯಾಲಯ ಶಾಸಕಾಂಗದ ಕೆಲಸ ಮಾಡಲಾಗದು. ನ್ಯಾಯಾಂಗ ತನ್ನ ಮಿತಿಯಲ್ಲಿ ವಿವೇಕದಿಂದ ವರ್ತಿಸುತ್ತದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅರ್ಜಿದಾರರ ಅತ್ತೆ ಉದ್ಯೋಗ ಮಾಡುತ್ತಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿ 2021ರ ಮೇ 2ರಂದು ಅವರು ಮೃತ್ತಪಟ್ಟಿದ್ದರು. ಪತಿ ಕೂಡ ಕೊರೊನಾಗೆ ಬಲಿಯಾಗಿದ್ದರು. ಹೀಗಾಗಿ ಅನುಕಂಪದ ಅಡಿ ಉದ್ಯೋಗ ಕೋರಿ ಸೊಸೆ ಪ್ರಿಯಾಂಕ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆ ಪ್ರಿಯಾಂಕ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಪ್ರಿಯಾಂಕ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ಕೆಎಟಿ ಕೂಡ ಮನವಿ ಪುರಸ್ಕರಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ಉದ್ಯೋಗ) ನಿಯಮ 2021ರ ನಿಯಮ 2(ಬಿ)(ಐಐ) ಅನ್ವಯ ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆಯನ್ನು ಸೇರಿಸಬೇಕು ಮತ್ತು ಅರ್ಜಿದಾರ ಮಹಿಳೆಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಅರ್ಜಿದಾರರ ಮನವಿಗೆ ಆಕ್ಷೇಪಣೆ ಸಲ್ಲಿಸಿದ್ದ ಸರ್ಕಾರದ ಪರ ವಕೀಲರು, ‘ಶಾಸಕಾಂಗವು ನಿಯಮಗಳನ್ನು ವಿವೇಚನೆ ಬಳಸಿಯೇ ರೂಪಿಸಿದೆ. ಎಚ್ಚರಿಕೆಯಿಂದಲೇ ಕುಟುಂಬದ ವ್ಯಾಖ್ಯಾನ ಮಾಡಿಲಾಗಿದೆ. ಹಾಗಾಗಿ, ಕೋರ್ಟ್ ಸೊಸೆಯನ್ನು ಕುಟುಂಬದ ವ್ಯಾಪ್ತಿಗೆ ಸೇರಿಸಲು ಬರುವುದಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಶಾಸಕಾಂಗದ ಕಾರ್ಯವನ್ನು ನ್ಯಾಯಾಂಗ ಮಾಡಿದಂತೆ ಆಗುತ್ತದೆ. ಹೀಗಾಗಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು ಎಂದು ವಾದಿಸಿದ್ದರು.
(WRIT PETITION NO.105264 OF 2024)