ಸುಪ್ರೀಂಕೋರ್ಟ್ ನ ಅಧಿಕೃತ ಭಾಷೆ ಇಂಗ್ಲಿಷ್, ಹೀಗಾಗಿ ವಾದ ಮಂಡಿಸುವ ಮುನ್ನ ನೀವು ಹೇಳುತ್ತಿರುವುದು ನ್ಯಾಯಾಲಯಕ್ಕೆ ಅರ್ಥವಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು ಎಂದು ಸುಪ್ರೀಂಕೋರ್ಟ್ ಹಿಂದಿಯಲ್ಲಿ ವಾದ ಮಂಡಿಸಿದ ಕಕ್ಷೀದಾರನಿಗೆ ತಿಳಿ ಹೇಳಿದೆ.
“ಈ ನ್ಯಾಯಾಲಯದಲ್ಲಿ ವಿಚಾರಣೆಗಳು ಇಂಗ್ಲಿಷ್‌ನಲ್ಲಿವೆ. ನೀವು ಪಾರ್ಟಿ ಇನ್ ಪರ್ಸನ್ ಆಗಿ ವಾದ ಮಾಡಲು ಬಂದಿದ್ದೀರಿ. ಆದ್ದರಿಂದ ನಾವು ನಿಮ್ಮನ್ನು ಮಧ್ಯದಲ್ಲಿ ನಿಲ್ಲಿಸಿಲ್ಲ, ಹೀಗಾಗಿ ನೀವು ಏನು ಹೇಳಲು ಬಯಸಿದ್ದೀರೋ ಅದನ್ನು ಹೇಳಿದ್ದೀರಿ. ಆದರೆ, ಇಲ್ಲಿ ಇಬ್ಬರು ನ್ಯಾಯಮೂರ್ತಿಗಳು ಕುಳಿತಿದ್ದು, ನ್ಯಾಯಾಲಯವು ನೀವು ಹೇಳುವುದನ್ನು ಅರ್ಥಮಾಡಿಕೊಳ್ಳುತ್ತಿದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನೀವು ಹಿಂದಿಯಲ್ಲಿ ವಾದ ಮಾಡಲು ಅನುಮತಿ ನೀಡಲಾಗದು” ಎಂದು ಸುಪ್ರೀಂಕೋರ್ಟ್ ಹಿಂದಿಯಲ್ಲಿ ವಾದ ಮಂಡಿಸಿದ ಕಕ್ಷೀದಾರನಿಗೆ ಹೇಳಿದೆ.
ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಪತ್ನಿಯ ಕೋರಿಕೆ ಮೇರೆಗೆ ಕೇಸನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಹಾಗೂ ನ್ಯಾಯಮೂರ್ತಿ ಎಸ್.ವಿ.ಎನ್ ಭಟ್ಟಿ ಅವರಿದ್ದ ಪೀಠ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರು ಹಿಂದಿಯಲ್ಲಿ ತಮ್ಮ ವಾದ ಮಂಡನೆ ಶುರು ಮಾಡಿದರು. ಅವರು ವಾದ ಮುಗಿಸಿದ ನಂತರ ನ್ಯಾಯಮೂರ್ತಿ ರಾಯ್ ಅವರು ಅರ್ಜಿದಾರರಿಗೆ ನ್ಯಾಯಾಲಯದ ಭಾಷೆಯ ಕುರಿತಂತೆ ತಿಳಿ ಹೇಳಿದರು. ಆ ಬಳಿಕ ಅರ್ಜಿದಾರರು ತಮ್ಮ ವಾದವನ್ನು ಇಂಗ್ಲಿಷನಲ್ಲಿಯೇ ಮುಂದುವರೆಸಿದರು.
ಸಂವಿಧಾನದ ವಿಧಿ 348ರ ಪ್ರಕಾರ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಗಳ ಅಧಿಕೃತ ಭಾಷೆ ಇಂಗ್ಲಿಷ್ ಆಗಿದೆ. ಹೈಕೋರ್ಟ್ ಗಳಲ್ಲಿ ಹಿಂದಿ ಅಥವಾ ಇತರೆ ಪ್ರಾದೇಶಿಕ ಭಾಷೆಯನ್ನು ರಾಷ್ಟ್ರಪತಿಗಳ ಪೂರ್ವಾನುಮತಿಯೊಂದಿಗೆ ಬಳಸಲು ಅವಕಾಶವಿದೆಯಾದರೂ, ಸುಪ್ರೀಂಕೋರ್ಟ್ ಗೆ ಇದು ಅನ್ವಯಿಸುವುದಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ನ ಅಧಿಕೃತ ಭಾಷೆ ಇಂಗ್ಲಿಷ್ ಆಗಿದ್ದು, ಅದರ ವಿಚಾರಣೆ ಮತ್ತು ಆದೇಶ, ತೀರ್ಪುಗಳು ಇಂಗ್ಲಿಷ್ ನಲ್ಲಿಯೇ ಇರಬೇಕಾಗುತ್ತದೆ.