ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ಆದೇಶಿಸಿದೆ.
ತನ್ನನ್ನು ಬಂಧಿಸಿರುವ ಸಿಬಿಐ ಕ್ರಮ ಆಕ್ಷೇಪಿಸಿ ಒಂದು ಅರ್ಜಿ ಹಾಗೂ ಜಾಮೀನು ಕೋರಿ ಮತ್ತೊಂದು ಅರ್ಜಿಯನ್ನು ಕೇಜ್ರಿವಾಲ್ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠ, ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದೆ.
ಇದೇ ವೇಳೆ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ ಕ್ರಮ ಕಾನೂನು ರೀತಿಯಲ್ಲಿಯೇ ಇದೆ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂ ತನ್ನ ತೀರ್ಪಿನಲ್ಲಿ, ಸಿಬಿಐ ನ್ಯಾಯಾಲಯದ ಆದೇಶವಿದ್ದುದರಿಂದ ಬಂಧನ ಮಾಡಬೇಕಾಯಿತು. ಇದು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 (ಎ) (3) ಉಲ್ಲಂಘನೆಯಲ್ಲ ಎಂದು ವಿವರಿಸಿದೆ.
ಅಲ್ಲದೇ, ಮ್ಯಾಜಿಸ್ಟ್ರೇಟ್ ಕೋರ್ಟ್ ವಾರೆಂಟ್ ಹೊರಡಿಸಿದ್ದಾಗ ತನಿಖಾ ಸಂಸ್ಥೆ ಅದಕ್ಕೆ ಕಾರಣ ನೀಡುವುದರಿಂದ ಮುಕ್ತವಾಗಿರುತ್ತದೆ. ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕ್ರಮದಲ್ಲಿ ಲೋಪವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಬಂಧನದ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.