ಬೆಂಗಳೂರು: ಮುುನ್ಸಿಪಾಲಿಟಿಯ ನಾಮನಿರ್ದೇಶಿತ ಸದಸ್ಯರು ಮುನ್ಸಿಪಲ್ ಕೌನ್ಸಿಲ್ ಸಭೆಯಯಲ್ಲಿ ಮತ ಹಾಕುವ ಹಕ್ಕು ಹೊಂದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಸಂವಿಧಾನದ ವಿಧಿ 243 ಆರ್(2)(ಎ) ಹಾಗೂ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 11(ಬಿ) ನಿಯಮಗಳನ್ನು ಎತ್ತಿಹಿಡಿದಿದೆ.
ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮತ ಪರಿಗಣಿಸಲು ಕೋರಿ ನಾಮನಿರ್ದೇಶಿತ ಸದಸ್ಯರಾದ ಲಕ್ಷ್ಮಿಕಾಂತ ಮತ್ತಿತರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ಹಾಗೂ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಜನರಿಂದ ನೇರವಾಗಿ ಮತ ಪಡೆದು ಆಯ್ಕೆಯಾದ ಸದಸ್ಯರು ಜವರ ಆದೇಶದೊಂದಿಗೆ ಬಂದಿರುತ್ತಾರೆ. ಆದರೆ, ನಾಮನಿರ್ದೇಶತ ಸದಸ್ಯರನ್ನು ನೇಮಕ ಮಾಡಲಾಗಿರುತ್ತದೆ. ಹೀಗಾಗಿ, ಇಬ್ಬರೂ ಮುನ್ಸಿಪಾಲಿಟಿ ಸದಸ್ಯರೇ ಆದರೂ ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಒಂದೇ ವರ್ಗಕ್ಕೆ ಸೇರಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಆದ್ದರಿಂದ, ನಾಮನಿರ್ದೇಶಿತ ಸದಸ್ಯರು ಮುನ್ಸಿಪಾಲಿಟಿ ಸಭೆಯಲ್ಲಿ ಮತ ಹಾಕದಂತೆ ನಿರ್ಬಂಧಿಸುವ ಸಂವಿಧಾನದ ವಿಧಿ 243ಆರ್(2)(ಎ) ಸಂವಿಧಾನದ ಅನುಚ್ಛೇದ 14ರ ಸಮಾನತೆಗೆ ವಿರುದ್ಧವಾಗಿಲ್ಲ. ಇಂತಹ ವಿಚಾರಗಳಲ್ಲಿ ಸಂವಿಧಾನವು ಸಮಾನತೆಯನ್ನು ವಿಭಿನ್ನವಾಗಿ ಪರಿಗಣಿಸುತ್ತದೆ. ಹೀಗಾಗಿ, ನಾಮನಿರ್ದೇಶಿತ ಸದಸ್ಯರನ್ನು ಚುನಾಯಿತ ಸದಸ್ಯರಿಗೆ ಸಮವೆಂದೂ ಅವರಿಗೆ ಮತ ಚಲಾಯಿಸುವ ಹಕ್ಕಿದೆ ಎಂದೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: 2021ರ ಡಿ. 30ರಂದು ಮಾಲೂರು ಪುರಸಭೆಯ ಅಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಗೂ ಮತ ಚಲಾಯಿಸಲು ಅವಕಾಶ ಕಲ್ಪಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 2(6) ಹಾಗೂ 42(2) ನಿಯಮಗಳು ನಮ್ಮನ್ನೂ ಮುನ್ಸಿಪಾಲಿಟಿ ಸದಸ್ಯರು ಎಂದೇ ಗುರುತಿಸುತ್ತವೆ. ಅದರಂತೆ ನಮಗೂ ಮತ ಚಲಾಯಿಸುವ ಹಕ್ಕಿದೆ.
ಆದರೆ, ಇದೇ ಕಾಯ್ದೆಯ ಸೆಕ್ಷನ್ 11(ಬಿ) ಹಾಗೂ ಸಂವಿಧಾನದ ವಿಧಿ 243ಆರ್(2)(ಎ) ನಿಯಮಗಳು ನಾಮನಿರ್ದೇಶಿತ ಸದಸ್ಯರ ಮತ ಚಲಾವಣೆಯನ್ನು ನಿರ್ಬಂಧಿಸುತ್ತವೆ. ಈ ನಿಯಮಗಳು ಸಂವಿಧಾನದ ವಿಧಿ 14ರ ಸಮಾನತೆಗೆ ವಿರುದ್ಧವಾಗಿವೆ. ಆದ್ದರಿಂದ ಈ ನಿಯಮಗಳನ್ನು ಅಸಿಂಧು ಎಂದು ಘೋಷಿಸಬೇಕು ಹಾಗೂ ತಮಗೆ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.
(WP 4457/2022)