ಅಪಘಾತ ಪ್ರಕರಣಗಳಲ್ಲಿ ಪೋಷಕರು ಮೃತಪಟ್ಟಾಗ ಅವರ ವಾರಸುದಾರರಿಗೆ ಪರಿಹಾರ ವಿತರಿಸುವಾಗ ಗಂಡು-ಹೆಣ್ಣುಮಕ್ಕಳು ಎಂದು ಭೇದ ಎಣಿಸಲು ಸಾಧ್ಯವಿಲ್ಲ. ವಿವಾಹಿತ ಪುತ್ರಿಯರೂ ಪರಿಹಾರ ಪಡೆಯಲು ಅರ್ಹರಿರುತ್ತಾರೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಅಪಘಾತ ಪ್ರಕರಣದಲ್ಲಿ ಮೃತ ಮಹಿಳೆಯ ವಿವಾಹಿತ ಪುತ್ರಿಯರಿಗೂ ಪರಿಹಾರ ಘೋಷಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ ಸಂದೇಶ್ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ: 2012ರಲ್ಲಿ ರೇಣುಕಾ ಎಂಬುವರು ಹುಬ್ಬಳ್ಳಿಯಿಂದ ಪ್ರಯಾಣಿಸುವಾಗ ಯಮನೂರು ಬಳಿ ಅಪಘಾತ ನಡೆದು ಮೃತಪಟ್ಟಿದ್ದರು. ಬಳಿಕ ರೇಣುಕಾರ ಪತಿ ಹಾಗೂ ವಿವಾಹಿತ ಹೆಣ್ಣುಮಕ್ಕಳು ಪರಿಹಾರ ಕೋರಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪತಿ ಹಾಗೂ ವಿವಾಹಿತ ಪುತ್ರಿಯರಿಗೆ ಒಟ್ಟು 5.91 ಲಕ್ಷ ರೂಪಾಯಿಯನ್ನು ಬಡ್ಡಿ ಸಹಿತ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶಿತ್ತು.
ವಿವಾಹಿತ ಪುತ್ರಿಯರಿಗೂ ವಿಮೆ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದ ನ್ಯಾಯಾಲಯಕ ಕ್ರಮ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯಲ್ಲಿ, ಮೃತ ಮಹಿಳೆಯ ಪತಿ ನಿವೃತ್ತ ಶಿಕ್ಷಕರಾಗಿದ್ದು ಪಿಂಚಣಿ ಪಡೆಯುತ್ತಿದ್ದಾರೆ. ಮೃತ ಮಹಿಳೆಯ ವಿವಾಹಿತ ಪುತ್ರಿಯರಿಗೂ ಪರಿಹಾರ ನೀಡಲು ಆದೇಶಿಸಲಾಗಿದೆ. ಇವರು ಯಾರೂ ಮೃತ ಮಹಿಳೆ ರೇಣುಕಾರನ್ನು ಅವಲಂಬಿಸಿರಲಿಲ್ಲ. ಹೀಗಾಗಿ, ಪರಿಹಾರ ನೀಡುವಂತೆ ಆದೇಶಿಸಿರುವ ಕ್ರಮ ಸರಿಯಲ್ಲ ಎಂದು ವಾದಿಸಿತ್ತು.
ಹೈಕೋರ್ಟ್ ತೀರ್ಪು: ಪ್ರಕರಣದ ವಿವರ ಆಲಿಸಿದ ಹೈಕೋರ್ಟ್, ಅವಂಬನೆ ಎಂಬುದು ಕೇವಲ ಆರ್ಥಿಕ ವಿಚಾರವನ್ನಷ್ಟೇ ಒಳಗೊಂಡಿರುವುದಿಲ್ಲ. ಭಾವಾನಾತ್ಮಕ ವಿಚಾರಗಳಲ್ಲಿಯೂ ಅವಲಂಬನೆಗಳಿರುತ್ತವೆ. ಇನ್ನು, ವಿವಾಹಿತ ಹೆಣ್ಣುಮಕ್ಕಳು ಪರಿಹಾರ ಕೋರಲು ಅರ್ಹರಲ್ಲ ಎಂಬ ವಿಮಾ ಸಂಸ್ಥೆಯ ವಾದ ಒಪ್ಪುವಂತದ್ದಲ್ಲ. ಗಂಡು ಮಕ್ಕಳು ಪರಿಹಾರ ಕೋರಬಹುದು ಎನ್ನುವುದಾದರೆ ವಿವಾಹಿತ ಹೆಣ್ಣುಮಕ್ಕಳೂ ಪರಿಹಾರ ಕೋರಲು ಅರ್ಹರಿರುತ್ತಾರೆ. ಗಂಡು-ಹೆಣ್ಣುಮಕ್ಕಳ ನಡುವೆ ತಾರತಮ್ಯ ಮಾಡಲು ಬರುವುದಿಲ್ಲ.
ಸುಪ್ರೀಂಕೋರ್ಟ್ ನ್ಯಾಷನಲ್ ಇನ್ಶ್ಯೂರೆನ್ಸ್ ವರ್ಸಸ್ ಬೀರೇಂದರ್ ಪ್ರಕರಣದಲ್ಲಿ ಮೃತ ವ್ಯಕ್ತಿಯ ವಾರಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ ಎಂದು ಸ್ಪಷ್ಟಪಡಿಸಿದೆ. ವಯಸ್ಕ, ವಿವಾಹಿತ ಮತ್ತು ಸಂಪಾದನೆ ಮಾಡುತ್ತಿರುವ ಮಕ್ಕಳೂ ಸಹ ಅರ್ಜಿ ಸಲ್ಲಿಸಬಹುದು. ಪರಿಹಾರ ಕೋರಿ ಅರ್ಜಿ ಸಲ್ಲಿಸುವ ವ್ಯಕ್ತಿ ಮೃತ ವ್ಯಕ್ತಿಯ ಅವಲಂಬಿತರೇ ಎಂಬ ಒಂದೇ ಅಂಶದ ಮೇಲೆ ಪರಿಹಾರ ನಿಗದಿ ಮಾಡಬೇಕು ಎಂಬುದು ಸರಿಯಲ್ಲ. ಅದರಂತೆ, ತಂದೆ-ತಾಯಿ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟಾಗ ವಿವಾಹಿತ ಪುತ್ರಿಯರೂ ಪರಿಹಾರ ಪಡೆಯಲು ಅರ್ಹರಿರುತ್ತಾರೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.