ಅಪರಾಧ ಚುಟವಟಿಕೆಗಳಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆರೆಯುವ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ.
ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾಗದಿದ್ದರೂ ಪೊಲೀಸರು ತಮ್ಮ ವಿರುದ್ಧ ರೌಡಿಶೀಟರ್ ತೆರೆಯುವ ಮೂಲಕ ನಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ನಮ್ಮ ವಿರುದ್ದ ತೆರೆದಿರುವ ರೌಡಿಶೀಟ್ ರದ್ದುಪಡಿಸಬೇಕು ಎಂದು ಕೋರಿ ಬಿ.ಎಸ್ ಪ್ರಕಾಶ ಹಾಗೂ ರಾಕೇಶ್ ಮಲ್ಲಿ ಸೇರಿದಂತೆ ಒಟ್ಟು 19 ಮಂದಿ ರೌಡಿಶೀಟರ್‌ಗಳು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಒಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗದಿದ್ದರೂ ಮತ್ತು ನ್ಯಾಯಾಲಯದಿಂದ ಯಾವುದೇ ಶಿಕ್ಷೆಗೆ ಗುರಿಯಾಗದ ಸಂದರ್ಭದಲ್ಲೂ ಅವರ ವಿರುದ್ಧ ರೌಡಿಶೀಟ್ ತೆರೆಯಬಹುದು. ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಅಪರಾಧ ಪ್ರಕರಣಗಳಿಂದ ಖುಲಾಸೆಯಾಗಿರುವ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎನ್ನುವುದು ಸರಿಯಲ್ಲ.
ರೌಡಿಯಾಗಿದ್ದವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ತಳ್ಳುಹಾಕುವಂತಿಲ್ಲ. ಮುಖ್ಯವಾಗಿ ರೌಡಿಶೀಟ್ ಆರಂಭಿಸುವುದೇ ರೌಡಿಗಳ ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಲು. ಆದ್ದರಿಂದ ಇದು ನ್ಯಾಯಸಮ್ಮತವಾದ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ರೌಡಿ ಶೀಟ್ ತೆರೆಯುವ ಮುನ್ನ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ರೂಪಿಸಿರುವ ಹೈಕೋರ್ಟ್, ರೌಡಿ ಶೀಟ್ ತೆರೆಯುವ ಮತ್ತು ರೌಡಿಪಟ್ಟಿಯಿಂದ ಹೆಸರು ಕೈಬಿಡುವ ವಿಚಾರಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು. ವಿಸ್ತೃತ ಕಾನೂನು ರೂಪಿಸುವವರೆಗೆ ಈ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಪಾಲಿಸಬೇಕು. ಹಾಗೆಯೇ, ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗಳಿಗೆ ಅವಕಾಶವಿರಬಾರದು. ಅದನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಮಾರ್ಗಸೂಚಿಗಳು
ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ರೌಡಿ ಶೀಟ್ ತೆರೆಯಬಹುದು. ಒಬ್ಬ ವ್ಯಕ್ತಿ ವಿರುದ್ಧ ರೌಡಿ ಶೀಟ್ ತೆರೆಯಬೇಕಾದರೆ ಆ ವ್ಯಕ್ತಿಗೆ ಮುಂಚಿತವಾಗಿ ನೋಟಿಸ್ ನೀಡಿ ಮಾಹಿತಿ ನೀಡಬೇಕು. ರೌಡಿ ಶೀಟ್ ಹಾಕದಂತೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು. ರೌಡಿ ಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು.
ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ರೌಡಿ ಶೀಟ್ ತೆಗೆಯಲು ಲಿಖಿತ ಆದೇಶ ಹೊರಡಿಸಬೇಕು. ಎರಡು ವರ್ಷಕ್ಕೊಮ್ಮೆ ರೌಡಿ ಶೀಟ್ ಅನ್ನು ಮರು ಪರಿಶೀಲನೆ ನಡಸಿ ಸಮಗ್ರವಾದ ಲಿಖಿತ ಆದೇಶ ಹೊರಡಿಸಬೇಕು. ರೌಡಿ ಶೀಟ್ ತೆರೆದ ನಂತರ ಆ ಬಗ್ಗೆ ಯಾವುದೇ ತಕರಾರು ಇದ್ದರೆ ಬಾದಿತ ವ್ಯಕ್ತಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ.
(WP 4504/2021)