News

ಲೈಂಗಿಕ ಕಿರುಕುಳ-ಅಪಹರಣ ಆರೋಪ: ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

Share It

ಬೆಂಗಳೂರು: ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತೆಯ ಅಪಹರಣ ಆರೋಪ ಪ್ರಕರಣದಲ್ಲಿ ಜಾಮೀನು ಕೋರಿ ಎಚ್.ಡಿ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

ಮೈಸೂರಿನ ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಆರೋಪದಡಿ ಬಂಧನಕ್ಕೆ ಸಿಲುಕಿರುವ ಮಾಜಿ ಸಚಿವ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಇಂದು ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿ, “ನನಗೆ ಸುಳ್ಳು ಹೇಳಿ ತಾಯಿ ಕರೆದೊಯ್ದರು ಎಂದು ಸಂತ್ರಸ್ತೆಯ ಪುತ್ರ ನೀಡಿರುವ ದೂರಿನಲ್ಲಿದೆ. ಆದರೆ, ಆಕೆಗೆ ಸುಳ್ಳು ಹೇಳಿ ವಂಚಿಸಿರುವ ಆರೋಪವು ಅಪಹರಣ ಆಗುವುದಿಲ್ಲ. ಸಿಎಂಗೆ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಬಂಧಿಸಬೇಕೆ? ಎಚ್‌ ಡಿ ರೇವಣ್ಣ ಹೇಳಿದ್ದಾರೆ ಎಂದು ಮಹಿಳೆ ಕರೆದೊಯ್ಯುವುದು ಹೇಗೆ ಅಪಹರಣವಾಗುತ್ತದೆ? ಇಲ್ಲಿ ಬಲ ಪ್ರಯೋಗದ ಆರೋಪವಿಲ್ಲ. ಮೋಸ ಮಾಡಿ ಕರೆದೊಯ್ದಿರುವ ಆರೋಪವೂ ಇಲ್ಲ. ಆದರೂ ರೇವಣ್ಣರನ್ನು ಒಂದನೇ ಆರೋಪಿ ಮಾಡಲಾಗಿದೆ. ದೂರಿನಲ್ಲಿ ಹೇಳಿರುವಂತೆ ಮಹಿಳೆಯು ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದವರು. ಸಂತ್ರಸ್ತೆಯನ್ನು ಬೆದರಿಸಿ ದೂರು ದಾಖಲಿಸಿಕೊಳ್ಳಲಾಗುತ್ತಿದೆ” ಎಂದು ವಾದಿಸಿದರು.

ಅಲ್ಲದೇ, “ರೇವಣ್ಣ ಅವರು ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ತನಿಖೆಗೆ ಸಹಕರಿಸಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪ್ರಕರಣವನ್ನು ಬಹಳ ವಿಜೃಂಭಿಸುವಂತೆ ಮಾಡಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ರೇವಣ್ಣ ಅವರ ವಿರುದ್ಧ ದಾಖಲಿಸಿರುವ ಪ್ರಕರಣಗಳು ಕಾನೂನು ಬಾಹಿರ. ಪ್ರಕರಣಗಳು ರೇವಣ್ಣ ಅವರಿಗೆ ಅನ್ವಯಿಸುವುದಿಲ್ಲ. ಬೇಲಬಲ್ ಸೆಕ್ಷನ್ ಅಡಿ ಕೇಸ್ ದಾಖಲಿಸಿದ ಬಳಿಕ ತರಾತುರಿಯಲ್ಲಿ ಅವರ ಮೇಲೆ ಈ ಕೇಸ್ ದಾಖಲಿಸಲಾಗಿದೆ. ಈ ಪ್ರಕರಣ ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ಪ್ರಚಾರದ್ದಾಗಿದೆ” ಎಂದು ಹಿರಿಯ ವಕೀಲ ನಾಗೇಶ್ ಸುದೀರ್ಘ ವಾದ ಮಂಡಿಸಿದರು.

ಎಸ್ಐಟಿ ಪರ ಹಾಜರಿದ್ದ ಹಿರಿಯ ವಕೀಲೆ ಜೈನಾ ಕೊಠಾರಿ, ರೇವಣ್ಣ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಬಳಿಕ ನ್ಯಾಯಾಲಯಕ್ಕೆ ಮನವಿ ಮಾಡಿ, ರೇವಣ್ಣ ಪರ ವಕೀಲರು ಸುಧೀರ್ಘ ವಾದ ಮಂಡನೆ ಮಾಡಿದ್ದು, ತಮ್ಮ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಮನವಿ ಬಿಟ್ಟು ವಾದ ಮಂಡಿಸಿ ಎಂದು ತಿಳಿಸಿತು.

ಬಳಿಕ ಕೆಲ ಕಾಲ ವಾದ ಮಂಡಿಸಿದ ಜೈನಾ ಕೊಠಾರಿ, ಆರೋಪಿಯ ಪುತ್ರ ಸಂತಸ್ತೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದು ಅತ್ಯಂತ ದೊಡ್ಡ ಅಪರಾಧ. ಸಂತ್ರಸ್ತೆಯನ್ನು ಅಪಹರಿಸಿರುವುದು ನಿಜವಲ್ಲವೇ? ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 364 ಅಡಿ ಪ್ರಕರಣ ದಾಖಲಾಗಿದೆ. ಇದು ಗಂಭೀರ ಪ್ರಕರಣವಾಗಿದೆ. ಜಾಮೀನು ಪಡೆದು ಬೇರೆ ಮಹಿಳೆಯರನ್ನು ಅಪಹರಣ ಮಾಡಿದರೆ ಗತಿಯೇನು? ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರೇವಣ್ಣ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಹೆಚ್ಚಿನ ವಾದ ಮಂಡಿಸಲು ಕಾಲಾವಕಾಶ ನೀಡಬೇಕು, ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಬೇಕು ಎಂದು ಕೋರಿದರು.

ಸುಧೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಅರ್ಜಿ ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿದರು.

ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮುನ್ನ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ರೇವಣ್ಣ ಅವರು, ತನಗೆ ಹೊಟ್ಟೆ ನೋವಿದ್ದರೂ ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿಲ್ಲ. ತನಿಖಾಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಮಹಿಳೆ ಅಪಹರಣವಾದ ದಿನ ನಾನು ಊರಿನಲ್ಲಿ ಇರಲಿಲ್ಲ. ಆ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ತನ್ನನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು.

ಪ್ರಸ್ತುತ ರೇವಣ್ಣ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಜಾಮೀನು ಸಿಗುವವರೆಗೂ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.

(CRL.MISC No.4229/2024)


Share It

You cannot copy content of this page