ಬೆಂಗಳೂರು: ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುವ ಮೂಲಕ ಅಪಘಾತ ಉಂಟುಮಾಡಿ ಓರ್ವ ವ್ಯಕ್ತಿಯ ಸಾವಿಗೆ ಹಾಗೂ ಇತರೆ ಮೂವರು ಗಂಭೀರವಾಗಿ ಗಾಯಗೊಳ್ಳುವುದಕ್ಕೆ ಕಾರಣವಾದ ಆಂಬ್ಯುಲೆನ್ಸ್ ಚಾಲಕನಿಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ಕಡಿಮೆ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ತನಗೆ ವಿಧಿಸಿರುವ ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿ ಆಂಬ್ಯುಲೆನ್ಸ್ ಚಾಲಕನಾಗಿದ್ದ ಎಸ್.ಸಂತೋಷ್ ಪೂಜಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಉಮೇಶ್ ಎಂ ಅಡಿಗ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಆಂಬ್ಯುಲೆನ್ಸ್ ಅನ್ನು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ. ಅದರ ಪರಿಣಾಮ ಕಾರಿನ ಚಾಲಕ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಯು ಆರೋಪಿಯು ಆಂಬ್ಯುಲೆನ್ಸ್ ನ್ನು ಅತಿವೇಗದಿಂದ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿರುವುದನ್ನು ಸೂಚಿಸುತ್ತದೆ. ಇಂತಹ ಆರೋಪಿಗೆ ಕೆಲವೇ ನೂರು ರೂಪಾಯಿಗಳ ನಾಮಮಾತ್ರದ ದಂಡವನ್ನು ವಿಧಿಸಿದರೆ, ಅದು ಸಮಾಜಕ್ಕೆ ಮತ್ತು ಅಪಘಾತದ ಸಂತ್ರಸ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಚಾಲಕನ ಪರ ವಾದ ಮಂಡಿಸಿದ್ದ ವಕೀಲರು ಆಂಬ್ಯುಲೆನ್ಸ್ ನ್ನು ನಿರ್ಲಕ್ಷ್ಯದಿಂದ ಚಲಾಯಿಸಿರಲಿಲ್ಲ. ಜತೆಗೆ ಆತನ ಸಾಮಾಜಿಕ ಜವಾಬ್ದಾರಿಗಳನ್ನು ಪರಿಗಣಿಸಿ ಶಿಕ್ಷೆಯಾಗಿ ದಂಡವನ್ನು ಮಾತ್ರ ವಿಧಿಸಬಹುದು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಇಂತಹ ಪ್ರಕರಣಗಳಲ್ಲಿ ಅನುಕಂಪ ತೋರಿದರೆ ಅದು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಚಾಲಕರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಅರ್ಜಿದಾರನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕಾರಿನಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದಾರೆ. ಜತೆಗೆ ಅದೇ ಕಾರಿನಲ್ಲಿದ್ದ ಇತರೆ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ದಂಡವನ್ನಷ್ಟೇ ವಿಧಿಸಿದರೆ, ಅದು ಅಪರಾಧದ ವಿರುದ್ಧ ನಾಮಮಾತ್ರದ ಶಿಕ್ಷೆಯಾಗುತ್ತದೆ. ಇನ್ನು ದಾಖಲೆಗಳನ್ನು ಪರಿಶೀಲಿಸಿದರೆ, ವಿಚಾರಣಾ ನ್ಯಾಯಾಲಯವು ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಕಾರಿನ ಚಾಲಕ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವ ಸಕಾರಣವೂ ಇಲ್ಲ ಎಂದು ಹೈಕೋರ್ಟ್ ಹೇಳಿದ್ದು, ಶಿಕ್ಷೆ ಕಡಿತಗೊಳಿಸಲು ನಿರಾಕರಿಸಿ ತೀರ್ಪು ನೀಡಿದೆ.
(CRL.RP 600/2017)