ಸುದ್ದಿ

ಹೈಕೋರ್ಟ್ ನಲ್ಲಿ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ: ಎಫ್ಐಆರ್ ದಾಖಲು

Share It

ಬೆಂಗಳೂರು: ಪ್ರಕರಣದ ವಿಚಾರಣೆಯ ವೇಳೆ ಹೈಕೋರ್ಟ್ ಪೀಠದ ಮುಂದೆಯೇ ಹರಿತವಾದ ವಸ್ತುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

ಮೈಸೂರಿನ ಶ್ರೀನಿವಾಸ್ ಚಿನ್ನಂ ಎಂಬುವರು ನಿನ್ನೆ (ಬುಧವಾರ) ಹೈಕೋರ್ಟ್​ನಲ್ಲಿ ವಿಚಾರಣೆಯ ವೇಳೆ ಕತ್ತಿಗೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಶ್ರೀನಿವಾಸ್​ ವಿರುದ್ಧ ಐಪಿಸಿ ಸೆಕ್ಷನ್​ 309 (ಆತ್ಮಹತ್ಯೆಗೆ ಯತ್ನ) ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಗಾಯಾಳು ಶ್ರೀನಿವಾಸ್ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಹಿನ್ನೆಲೆ: ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ.ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶ್ರೀನಿವಾಸ್ ಅವರ ವ್ಯಾಜ್ಯದ ಕುರಿತು ವಿಚಾರಣೆ ನಡೆಯುತ್ತಿದ್ದಾಗ, ಏಕಾಏಕಿ ಅವರು ‘ನನಗೆ ನ್ಯಾಯ ಕೊಡಿಸಿ’ ಎಂದು ಹೇಳುತ್ತಾ ಕುತ್ತಿಗೆ ಕೊಯ್ದುಕೊಳ್ಳಲು ಪ್ರಯತ್ನಿಸಿದ್ದರು.

ಅನಿರೀಕ್ಷಿತ ಘಟನೆಯಿಂದಾಗಿ ಹೈಕೋರ್ಟ್​ ಹಾಲ್​-1ರಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಶ್ರೀನಿವಾಸ್​ ಅವರ ನಡೆಯಿಂದಾಗಿ ಅಲ್ಲಿದ್ದ ವಕೀಲರು ದಿಗ್ಭ್ರಮೆಗೊಂಡು, ತಕ್ಷಣವೇ ಅವರನ್ನು ತಡೆದಿದ್ದರು. ಆದರೆ, ಕುತ್ತಿಗೆಗೆ ತೀವ್ರ ಗಾಯವಾಗಿತ್ತು. ಬಳಿಕ ಶ್ರೀನಿವಾಸ್​ರನ್ನು ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆತ್ಯಹತ್ಯೆಗೆ ಯತ್ನಿಸಿದ ಶ್ರೀನಿವಾಸ್​ ತಮಗೆ ವ್ಯವಹಾರದಲ್ಲಿ ಬೇರೊಬ್ಬ ವ್ಯಕ್ತಿ ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಸಿವಿಲ್ ಕೋರ್ಟ್ ನಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿದ್ದು, ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಅವರು ಜಡ್ಜ್​ ಮುಂದೆಯೇ ಕುತ್ತಿಗೆಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಗಾಯಾಳು ಚೇತರಿಸಿಕೊಂಡ ಬಳಿಕ ಅವರ ಹೇಳಿಕೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page