ಮುಂಬೈ: ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮುಂಬೈನಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ನ ಆಪ್ತ ರಾಮ್ ನಾರಾಯಣ ಗುಪ್ತಾ ಅಲಿಯಾಸ್ ಲಖನ್ ಬಯ್ಯಾನನ್ನು 2006ರಲ್ಲಿ ಎನ್ಕೌಂಟರ್ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಪೊಲೀಸರಿಗೆ ಶಿಕ್ಷೆ ವಿಧಿಸಿತ್ತಾದರೂ ಅಧಿಕಾರಿ ಪ್ರದೀಪ್ ಶರ್ಮಾರನ್ನು ಖುಲಾಸೆಗೊಳಿಸಿತ್ತು. ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶ ರದ್ದು ಮಾಡಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠ, “ಸೆಷನ್ಸ್ ಕೋರ್ಟ್ ಆರೋಪಿ ಶರ್ಮಾ ವಿರುದ್ಧ ಲಭ್ಯವಿರುವ ಸಾಕ್ಷ್ಯಗಳನ್ನು ಕಡೆಗಣಿಸಿದೆ. ಜನರ ಜೀವ ರಕ್ಷಿಸಬೇಕಾದವರೇ ಕೊಲ್ಲುವ ಹಂತಕ್ಕೆ ಇಳಿದಿರುವುದು ಗಂಭೀರ ವಿಚಾರವಾಗಿದೆ” ಎಂದಿದೆ. ಅಲ್ಲದೇ, ಮೂರು ವಾರಗಳಲ್ಲಿ ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯದ ಮುಂದೆ ಶರಣಾಗುವಂತೆ ಹೈಕೋರ್ಟ್ ಶರ್ಮಾಗೆ ಸೂಚಿಸಿದೆ.
ಹಿನ್ನೆಲೆ- 2006ರ ನವೆಂಬರ್ 11 ರಂದು ಛೋಟಾ ರಾಜನ್ ಆಪ್ತ ಲಖನ್ ಬೈಯ್ಯಾ ನನ್ನು ಹಿರಿಯ ಪೊಲೀಸ್ ಇನ್ಸಪೆಕ್ಟರ್ ಹಾಗೂ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಶ್ ಶರ್ಮಾ ಒಳಗೊಂಡ ಪೊಲೀಸರ ತಂಡ ಎನ್ ಕೌಂಟರ್ ಮಾಡಿತ್ತು. ಈ ಪ್ರಕರಣದಲ್ಲಿ ಪೊಲೀಸರು ಲಖನ್ ಬಯ್ಯಾನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ವಿಚಾರಣಾ ನ್ಯಾಯಾಲಯ ಪೊಲೀಸರು ಸೇರಿದಂತೆ 13 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತಾದರೂ, ಪ್ರದೀಪ್ ಶರ್ಮಾರನ್ನು ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಖುಲಾಸೆ ಮಾಡಿತ್ತು. ಖುಲಾಸೆ ಪ್ರಶ್ನಿಸಿ ಲಖನ್ ಬಯ್ಯಾ ಸಂಬಂಧಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಚವಾಣ್ ಅವರು ನಕಲಿ ಎನ್ಕೌಂಟರ್ ಪ್ರಕರಣದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯ ಪಾಲಕರಾದ ಪೊಲೀಸ್ ಅಧಿಕಾರಿಗಳೇ ಯೋಜಿತ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಾದಿಸಿದ್ದರು.