ಬೆಂಗಳೂರು: ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಯಾಗಿ ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ನ್ಯಾ.ಅನು ಶಿವರಾಮನ್ ವರ್ಗಾವಣೆ ಕೋರಿದ್ದರು. ಮನವಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ಕರ್ನಾಟಕ ಹೈಕೋರ್ಟ್ ಗೆ ವರ್ಗಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಈ ಮೇರೆಗೆ ರಾಷ್ಟ್ರಪತಿಗಳು ನ್ಯಾ. ಅನು ಶಿವರಾಮನ್ ಅವರನ್ನು ರಾಜ್ಯ ಹೈಕೋರ್ಟ್ ಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಭಾರತದ ಸಂವಿಧಾನದ 222 ನೇ ವಿಧಿಯ ಷರತ್ತು (1) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ರಾಷ್ಟ್ರಪತಿಗಳು ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ವರ್ಗಾವಣೆ ಮಾಡಿದ್ದಾರೆಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ.
ನ್ಯಾ. ಅನು ಶಿವರಾಮನ್ ಅವರು 2015 ರ ಏಪ್ರಿಲ್ ನಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಮೂರ್ತಿಗಳಾಗಿ ನೇಮಕವಾಗಿದ್ದರು. 2017 ರ ಏಪ್ರಿಲ್ ನಿಂದ ಕಾಯಂ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.