ಬೆಂಗಳೂರು: ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.
ಕನ್ನಡ ಕಡ್ಡಾಯಗೊಳಿಸುವ ಕಾಯ್ದೆ ಹಾಗೂ ಸುತ್ತೋಲೆಯನ್ನು ಪ್ರಶ್ನಿಸಿ ‘ರೀಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ಹಾಗೂ ಹಲವು ಕಂಪನಿಗಳು ಸಲ್ಲಿಸಿದ್ದತಕರಾರು ಅರ್ಜಿಗಳನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಕನ್ನಡ ನಾಮಫಲಕ ಹಾಕುವುದರಲ್ಲಿ ತಪ್ಪೇನಿದೆ?
ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅರ್ಜಿದಾರರನ್ನು ಪ್ರಶ್ನಿಸಿ, ‘ನಾಮಫಲಕದಲ್ಲಿ ಕನ್ನಡವನ್ನು ದೊಡ್ಡದಾಗಿ ಬಳಸಿದರೆ ನಿಮಗೆ ಯಾವ ಸಮಸ್ಯೆಯಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕನ್ನಡ ಬಳಕೆಗೆ ಸಮಯಾವಕಾಶ ಬೇಕಾದರೆ ಸರ್ಕಾರ ನೀಡಲಿದೆ,” ಎಂದರು. “ಅಲ್ಲದೆ, ಕರ್ನಾಟಕದಲ್ಲಿ ನೀವು ವ್ಯಾಪಾರ ಮಾಡುತ್ತಿದ್ದೀರಿ. ಕನ್ನಡ ಬಳಕೆ ಮಾಡುವುದರಿಂದ ನಿಮಗೆ ಏನು ತೊಂದರೆಯಾಗಲಿದೆ. ಹೆಸರುಗಳನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಹೇಳುತ್ತಿಲ್ಲ, ಸಂಸ್ಥೆಯಲ್ಲಿ ಪ್ರತಿ ಉದ್ಯೋಗಿಯು ಕನ್ನಡಿಗನಾಗಿರಬೇಕು ಎಂದು ನಿಯಮ ಹೇರುತ್ತಿಲ್ಲ. ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದಷ್ಟೇ ಹೇಳುತ್ತಿದೆ. ಅದರಲ್ಲಿ ತಪ್ಪೇನಿದೆ?,” ಎಂದು ಪ್ರಶ್ನಿಸುವ ಮೂಲಕ ನ್ಯಾಯಪೀಠ, ಅರ್ಜಿದಾರರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ಎಲ್ಲಾ ಬಗೆಯ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಜಾರಿ ಸಮರ್ಪಕವಾಗಿಲ್ಲ. ಜಾರಿ ದಿನಾಂಕದ ಬಗ್ಗೆ ಗೆಜೆಟ್ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಜತೆಗೆ, ಡಿಜಿಟಲ್ ನಾಮಫಲಕಗಳನ್ನು ಬದಲಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ,” ಎಂದರು. ”ಅಲ್ಲದೆ, ಸರ್ಕಾರ ಮತ್ತು ಬಿಬಿಎಂಪಿ ಸ್ವಲ್ಪ ಸಮಯಾವಕಾಶ ನೀಡಿದ್ದರೂ ಅದು ಸಾಕಾಗಿಲ್ಲ. ಒಂದೇ ಸಲ ಎಲ್ಲಾ ವಾಣಿಜ್ಯ – ಸಂಸ್ಥೆಗಳು ಫಲಕ ಬದಲಾವಣೆಗೆ ಮುಂದಾಗಿರುವುದರಿಂದ ನಾಮಫಲಕಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ, ಆದರೆ, ಸರ್ಕಾರ ಮತ್ತು ಬಿಬಿಎಂಪಿ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡವಿಲ್ಲದಿದ್ದರೆ ವಾಣಿಜ್ಯ ಸಂಸ್ಥೆಗಳನ್ನು ಸೀಲ್‌ಡೌನ್ ಮಾಡಿ ಮುಚ್ಚುತ್ತಿವೆ. ಇದು ಸರ್ಕಾರದ ಉಗ್ರ ಕ್ರಮವಾಗಿದೆ. ಇದರಿಂದ ವಾಣಿಜ್ಯ ಸಂಸ್ಥೆಯ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುತ್ತಿದೆ,” ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ‘ಸುತ್ತೋಲೆ ಅನುಸಾರ ವಾಣಿಜ್ಯ ಸಂಸ್ಥೆಗಳ ವಿರುದ್ಧ ಸದ್ಯಕ್ಕೆ ಬಲವಂತದ ಕ್ರಮ ಜರುಗಿಸಬಾರದು. ಹಾಗೆಯೇ, ಕಾಯ್ದೆ ಯಾವ ದಿನದಿಂದ ಜಾರಿಗೆ ಬಂದಿದೆ, ಯಾವ ದಿನ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು,” ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.