-ಮಲ್ಲಿಕಾರ್ಜುನ ಟಿ, ವಕೀಲರು, 9845051233
ದೆಹಲಿ: ಆರೋಪಿಗೆ ಜಾಮೀನು ಮಂಜೂರು ಮಾಡಲು ಷರತ್ತುಗಳನ್ನು ವಿಧಿಸುವ ವೇಳೆ ಸಕಾರಣವಿಲ್ಲದೆ ಹೆಚ್ಚಿನ ಮೊತ್ತದ ಶ್ಯೂರಿಟಿ ವಿಧಿಸುವುದು ಆತನ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದೇ ವೇಳೆ ಆರೋಪಿಗೆ ಜಾಮೀನು ನೀಡಲು ವಿಧಿಸಿದ್ದ 10 ಲಕ್ಷ ರೂಪಾಯಿ ಶ್ಯೂರಿಟಿ ಮೊತ್ತವನ್ನು 25 ಸಾವಿರಕ್ಕೆ ಇಳಿಸಿ ಸಿಜೆಐ ಡಿ.ವೈ ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ, ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಾಗ ಶ್ಯೂರಿಟಿ ನೀಡಲು ನಿರ್ದೇಶಿಸುವುದು ಆತ ಪ್ರಕರಣದ ಮುಂದಿನ ಪ್ರಕ್ರಿಯೆಗಳಲ್ಲಿ ಭಾಗಿಯಾಗುವಂತೆ ಖಚಿತಪಡಿಸಿಕೊಳ್ಳುವುದಕ್ಕಾಗಿ. ಹೀಗಾಗಿ ಶ್ಯೂರಿಟಿ ಮೊತ್ತವನ್ನು ವಿವೇಚನೆ ಬಳಸಿ ವಿಧಿಸಬೇಕಾಗುತ್ತದೆ. ಸಕಾರಣಗಳಿಲ್ಲದೇ ಹೆಚ್ಚಿನ ಮೊತ್ತದ ಶ್ಯೂರಿಟಿ ನೀಡುವಂತೆ ಆದೇಶಿಸುವುದು ಜಾಮೀನು ನೀಡುವುದರ ಹಿಂದಿನ ಉದ್ದೇಶವನ್ನೇ ಕೆಡಿಸುತ್ತದೆ. ಜತೆಗೆ ಹಾಗೆ ಹೆಚ್ಚಿನ ಮೊತ್ತದ ಶ್ಯೂರಿಟಿಗೆ ನಿರ್ದೇಶಿಸುವುದು ಆತನಿಗೆ ಸಂವಿಧಾನದ ವಿಧಿ 21 ರ ಅಡಿ ನೀಡಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಆರೋಪಿ ಅಶೋಕ್ ಸಿಂಗ್ ಎಂಬುವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409, 419, 420, 467, 468, 471 ಹಾಗೂ 120B ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಹೆಚ್ಚಿನ ಮೊತ್ತದ ಶ್ಯೂರಿಟಿ ಷರತ್ತು ವಿಧಿಸಲು ಸೂಚಿಸಿತ್ತು. ಅದರಂತೆ ವಿಚಾರಣಾ ನ್ಯಾಯಾಲಯ 10 ಲಕ್ಷ ಮೊತ್ತಕ್ಕೆ ಶ್ಯೂರಿಟಿ ನೀಡಲು ಆದೇಶಿಸಿತ್ತು.
ಈ ಶ್ಯೂರಿಟಿ ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಆರೋಪಿಗೆ 2023ರ ಅಕ್ಟೋಬರ್ 18 ರಂದೇ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ. ಆದರೆ, 10 ಲಕ್ಷದ ಶ್ಯೂರಿಟಿ ನೀಡಲಾಗದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂಬುದನ್ನು ಗಮನಿಸಿ ಶ್ಯೂರಿಟಿ ಮೊತ್ತವನ್ನು 10 ಲಕ್ಷದಿಂದ 25 ಸಾವಿರಕ್ಕೆ ಇಳಿಸಿದೆ. ಅಲ್ಲದೇ ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
(Petition(s) for Special Leave to Appeal (Crl.) No.3314/2024)