News

ತಮ್ಮ ಆಸ್ತಿ ವಿವರ ಸಾರ್ವಜನಿಕರ ಮುಂದಿಡುತ್ತಿರುವ ರಾಜ್ಯದ ಏಕೈಕ ನ್ಯಾಯಮೂರ್ತಿ ಇವರು

Share It

ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರು ನಿಗದಿತವಾಗಿ ತಮ್ಮ ಆಸ್ತಿಯ ವಿವರವನ್ನು ತಮ್ಮ ಇಲಾಖೆ ಅಥವಾ ಅದರ ಮುಖ್ಯಸ್ಥರಿಗೆ ಸಲ್ಲಿಸುತ್ತಾರೆ.

ಆದರೆ, ಇಂತಹ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ತೆರೆದಿಡುವುದು ಅವರವರ ಆಯ್ಕೆ. ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕರ ಮುಂದಿಟ್ಟಾಗ ಜನರಲ್ಲಿ ಅವರ ಬಗ್ಗೆ ವಿಶ್ವಾಸ ಮತ್ತು ನಂಬಿಕೆ ಮೂಡುತ್ತದೆ. ಇದೇ ವೇಳೆ ಆ ಸಂಸ್ಥೆ ಅಥವಾ ಇಲಾಖೆಯ ಕುರಿತಂತೆಯೂ ಸಾರ್ವಜನಿಕರ ಭರವಸೆ ಗಟ್ಟಿಯಾಗುತ್ತದೆ. ಸಾರ್ವಜನಿಕ ಉತ್ತರದಾಯಿತ್ವವೂ ಬಲಗೊಳ್ಳುತ್ತದೆ.

ಇಂತಹ ಸಾರ್ವಜನಿಕ ಉತ್ತರದಾಯಿತ್ವವನ್ನು ಗೌರವಿಸಿಕೊಂಡು ಬರುತ್ತಿರುವ ಹಾಗೂ ರಾಜ್ಯದ ಜನತೆಯ ಮುಂದೆ ಪ್ರತಿ ವರ್ಷವೂ ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸುತ್ತಿರುವ ಮಾದರಿ ನ್ಯಾಯಮೂರ್ತಿ ಬಿ. ವೀರಪ್ಪ. ರಾಜ್ಯ ಹೈಕೋರ್ಟ್ ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿರುವ ಬಿ. ವೀರಪ್ಪ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಾನವೀಯ ಮೌಲ್ಯಗಳಿಗೆ ಒತ್ತು: ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು ಮತ್ತು ನ್ಯಾಯಾಲಯಗಳು ಬರೀ ಕಾನೂನು ಪುಸ್ತಕಗಳನ್ನು ಅವಲಂಬಿಸಿ ನ್ಯಾಯ ನೀಡುವ ಬದಲಿಗೆ ಸಾಮಾಜಿಕ ನೆಲೆಗಟ್ಟು ಮತ್ತು ಮಾನವೀಯತೆಯನ್ನು ಪರಿಗಣಿಸಿ ನ್ಯಾಯದಾನ ಮಾಡಬೇಕು ಎಂದು ಬಲವಾಗಿ ನಂಬಿರುವ ನ್ಯಾಯಮೂರ್ತಿ ಇವರು. ನ್ಯಾ. ಬಿ ವೀರಪ್ಪ ಅವರ ತೀರ್ಪುಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ಲೋಕಾಯುಕ್ತಕ್ಕೆ ಮರುಜೀವ: ಒಂದು ಕಾಲದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತವನ್ನು ರಾಜ್ಯ ಸರ್ಕಾರ ಎಸಿಬಿ ರಚಿಸುವ ಮೂಲಕ ಮೂಲೆಗುಂಪು ಮಾಡಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿ ಲೋಕಾಯುಕ್ತಕ್ಕೆ ಮರುಜೀವ ನೀಡಿದ ಕೀರ್ತಿ ನ್ಯಾ. ಬೀರಪ್ಪ ಅವರಿಗೆ ಸಲ್ಲಬೇಕು. ಇಂತಹ ದಿಟ್ಟ ಮತ್ತು ಐತಿಹಾಸಿಕ ತೀರ್ಪು ನೀಡಿರುವ ನ್ಯಾ. ಬಿ. ವೀರಪ್ಪ ಪ್ರತಿ ವರ್ಷವೂ ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸುವ ಮೂಲಕ ಉನ್ನತ ಹುದ್ದೆಯಲ್ಲಿ ಇರುವವರಿಗೆ ಮಾದರಿಯಾಗಿದ್ದಾರೆ.

ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ

ಕಡ್ಡಾಯವಲ್ಲ: ನಿಯಮಾನುಸಾರ ಎಲ್ಲ ನ್ಯಾಯಮೂರ್ತಿಗಳೂ ತಮ್ಮ ಆಸ್ತಿಯ ವಿವರಗಳನ್ನು ಪ್ರತಿ ವರ್ಷ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸುತ್ತಾರೆ. ಆದರೆ, ಈ ವಿವರವನ್ನು ಸಾರ್ವಜನಿಕಗೊಳಿಸುವುದು ಕಡ್ಡಾಯವಲ್ಲ. ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳಬೇಕೆಂಬ ನಿಯಮ ಅಥವಾ ಕಾಯ್ದೆಯೂ ನಮ್ಮಲ್ಲಿಲ್ಲ. ಹಾಗಿದ್ದೂ, ನ್ಯಾಯಾಂಗದ ಬಗೆಗಿನ ಸಾರ್ವಜನಿಕ ನಂಬಿಕೆಯನ್ನು ಬಲಪಡಿಸಲು ಇಂತಹುದ್ದೊಂದು ಕ್ರಮ ಅನುಸರಿಸುವಂತೆ ಸುಪ್ರೀಂಕೋರ್ಟ್ 1997ರಲ್ಲಿ ಕರೆ ನೀಡಿತ್ತು.

ಆಗಿನ ಸಿಜೆಐ ನೇತೃತ್ವದಲ್ಲಿ ನಡೆದ ನ್ಯಾಯಮೂರ್ತಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಹಾಗೂ ಸಾಲದ ವಿವರಗಳನ್ನು ತಂತಮ್ಮ ಕೋರ್ಟ್ ವೆಬ್ ಸೈಟ್ ಗಳಲ್ಲಿ ಪ್ರಕಟಿಸಿಕೊಂಡು ಬರುತ್ತಿದ್ದರು. ಆದರೆ, ಹೀಗೆ ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸುವ ನ್ಯಾಯಮೂರ್ತಿಗಳ ಸಂಖ್ಯೆ ಬಹುತೇಕ ಕ್ಷೀಣಿಸಿದೆ.

ನ್ಯಾ. ಬಿ. ವೀರಪ್ಪ ಆಸ್ತಿ ವಿವರ: ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಮ್ಮ ಆಸ್ತಿಯ ಕುರಿತಂತೆ ಪ್ರತಿವರ್ಷವೂ ಹೈಕೋರ್ಟ್ ವೆಬ್ ಸೈಟ್ ನಲ್ಲಿ ಅಪ್ಡೇಟ್ ಮಾಡಿಕೊಂಡು ಬರುತ್ತಿದ್ದಾರೆ. ಅದರಂತೆ ವರ್ಷಾಂತ್ಯದಲ್ಲಿ ತಮ್ಮೆಲ್ಲಾ ಆಸ್ತಿಯ ವಿವರಗಳನ್ನು ಸಾರ್ವಜನಿಕಗೊಳಿಸಿದ್ದಾರೆ. ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿರುವ ಸ್ಥಿರ-ಚರಾಸ್ತಿಯ ವಿವರಗಳನ್ನು ಹೈಕೋರ್ಟ್ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.

ಆಸ್ತಿ ವಿವರ ಬಹಿರಂಗಗೊಳಿಸಿದ್ದ ನ್ಯಾಯಮೂರ್ತಿಗಳು: ನ್ಯಾ. ಬಿ ವೀರಪ್ಪರಂತೆಯೇ ಇನ್ನೂ ಕೆಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಈ ಹಿಂದೆ ಬಹಿರಂಗಗೊಳಿಸಿದ್ದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿರುವ ಬಿ.ವಿ ನಾಗರತ್ನ ಅವರು 2009ರಲ್ಲಿ ತಮ್ಮ ಆಸ್ತಿ ಕುರಿತ ವಿವರ ಪ್ರಕಟಿಸಿದ್ದರು. ಗುಜರಾಜ್ ಹೈಕೋರ್ಟ್ ಸಿಜೆಯಾಗಿರುವ ನ್ಯಾ, ಅರವಿಂದ್ ಕುಮಾರ್ ಅವರು 2009ರಲ್ಲಿ ಆಸ್ತಿ ಘೋಷಿಸಿಕೊಂಡಿದ್ದರು. ಅದೇ ರೀತಿ ನಿವೃತ್ತ ನ್ಯಾ. ಕೆ.ಎನ್ ಫಣೀಂದ್ರ ಹಾಗೂ ನ್ಯಾ. ಜಿ. ನರೇಂದರ್ ತಮ್ಮ ಆಸ್ತಿ ಹಾಗೂ ಸಾಲಗಳ ವಿವರವನ್ನು 2015ರಲ್ಲಿ ಘೋಷಿಸಿಕೊಂಡಿದ್ದರು.

ನ್ಯಾಯಾಂಗದ ಮೇಲಿನ ನಿರೀಕ್ಷೆ: ಪ್ರಸ್ತುತ ಶಾಸಕಾಂಗ ಹಾಗೂ ಕಾರ್ಯಾಂಗಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನವಿದೆ. ರಾಜಕಾರಣಿಗಳು, ಸರ್ಕಾರಿ ನೌಕರರು ತಮ್ಮ ಜವಾಬ್ದಾರಿಗಿಂತ ಅಧಿಕಾರವನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದು ಈ ಅಸಮಾಧಾನಕ್ಕೆ ಕಾರಣ. ಹೀಗಾಗಿಯೇ ಶೋಷಿತ ಅಥವಾ ಅನ್ಯಾಯಕ್ಕೆ ಒಳಗಾದ ಜನರ ಕಣ್ಣಿಗೆ ನ್ಯಾಯಾಂಗವಷ್ಟೇ ಆಶಾಕಿರಣವಾಗಿ ಕಾಣುತ್ತಿದೆ. ನ್ಯಾಯಾಂಗದ ಮೇಲಿನ ನಿರೀಕ್ಷೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನ್ಯಾಯಮೂರ್ತಿ ಬಿ. ವೀರಪ್ಪ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದಲ್ಲಿ ನ್ಯಾಯಾಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.


Share It

You cannot copy content of this page