News

60 ದಿನದಲ್ಲಿ ತನಿಖೆ ಮುಗಿಸಬೇಕು: ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

Share It

ಸಣ್ಣಪುಟ್ಟ ಅಪರಾಧ ಪ್ರಕರಣಗಳನ್ನು 60 ದಿನಗಳಲ್ಲಿ ಹಾಗೂ ಘೋರ ಅಪರಾಧ ಪ್ರಕರಣಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಪೊಲೀಸ್‌ ಮತ್ತು ತನಿಖಾ ಸಂಸ್ಥೆಗಳಿಗೆ ನಿರ್ದೇಶಿಸಿದೆ.

ಖಾಸಗಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ನೀಡಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ ಪೊಲೀಸರಿಗೆ ಹಾಗೂ ಮ್ಯಾಜಿಸ್ಟ್ರೇಟ್ ಗಳಿಗೆ ಅನ್ವಯಿಸುವಂತೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಹಣಕಾಸು ವಂಚನೆ, ಭ್ರಷ್ಟಾಚಾರ, ಹವಾಲಾ ದಂಧೆ ಮತ್ತು ಡಿಜಿಟಲ್‌ ಕರೆನ್ಸಿ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಪೊಲೀಸ್‌ ಸಿಬ್ಬಂದಿಗೆ ಅಗತ್ಯ ತಾಂತ್ರಿಕ ತರಬೇತಿ ನೀಡುವ ಅಗತ್ಯತೆಯ ಬಗ್ಗೆ ಪೀಠ ಪ್ರಸ್ತಾಪಿಸಿದೆ. ಅಲ್ಲದೇ, ರಾಜಕೀಯ ಹಸ್ತಕ್ಷೇಪದಿಂದ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಲು ಧೀರ್ಘಾವಧಿ ತೆಗೆದುಕೊಂಡಾಗ ಸಾಕ್ಷ್ಯಗಳು ನಾಶವಾಗಬಹುದು. ಹೀಗಾಗಿ, ಮ್ಯಾಜಿಸ್ಟ್ರೇಟ್ ಸಿಆರ್ಪಿಸಿ ಸೆಕ್ಷನ್ 156(3) ರಡಿ ಲಭ್ಯವಿರುವ (ತನಿಖೆಗೆ ಆದೇಶಿಸುವ) ಅಧಿಕಾರವನ್ನು ಚಲಾಯಿಸಬೇಕು ಎಂದು ನಿರ್ದೇಶಿಸಿದೆ.

ತ್ವರಿತ ತನಿಖೆ-ವಿಚಾರಣೆಗೆ ನಿರ್ದೇಶನಗಳು

  • ಅಪರಾಧ ಪ್ರಕರಣಗಳನ್ನು (1)ಸಣ್ಣ, (2)ಗಂಭೀರ ಮತ್ತು (3)ಘೋರ ಅಪರಾಧಗಳು ಎಂದು ವರ್ಗೀಕರಿಸಬಹುದು. ಸಣ್ಣಪುಟ್ಟ ಅಪರಾಧಗಳ ತನಿಖೆ ಪೂರ್ಣಗೊಳಿಸಲು 60 ದಿನಗಳ ಗಡುವು ವಿಧಿಸಬಹುದು. ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಲು ಸೂಕ್ತ ಕಾರಣಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್‌ ಅವರು ಸಮಯ ವಿಸ್ತರಿಸಬಹುದು.
  • ಗಂಭೀರ ಮತ್ತು ಘೋರ ಅಪರಾಧಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಈ ವೇಳೆ ತನಿಖಾಧಿಕಾರಿ ಕೋರಿಗೆ ಮೇರೆಗೆ ತನಿಖೆ ಪೂರ್ಣಗೊಳಿಸಲು ಮ್ಯಾಜಿಸ್ಟ್ರೇಟ್ ಹೆಚ್ಚಿನ ಕಾಲಾವಕಾಶ ನೀಡಬಹುದು. ಆದರೆ, ಅದಕ್ಕೆ ಸೂಕ್ತ ಕಾರಣಗಳಿರಬೇಕು.
  • ತನಿಖೆ ಶೀಘ್ರವಾಗಿ ನಡೆಯುತ್ತಿಲ್ಲ ಅಥವಾ ವಿಳಂಬವಾಗುತ್ತಿದೆ ಎನ್ನಿಸಿದರೆ ಮ್ಯಾಜಿಸ್ಟ್ರೇಟ್ ವಿಳಂಬಕ್ಕೆ ಕಾರಣ ಕೇಳಬಹುದು ಹಾಗೂ ಸಿಆರ್ಪಿಸಿ ಸೆಕ್ಷನ್ 156(3) ಅಡಿ ಲಭ್ಯವಿರುವ (ತನಿಖೆಗೆ ಆದೇಶಿಸುವ) ಅಧಿಕಾರ ಚಲಾಯಿಸಬಹುದು.
  • ದೂರು ನೀಡಿದ ಬಳಿಕ ಎಫ್ಐಆರ್ ದಾಖಲಿಸಿಲ್ಲ ಎಂಬ ಕುರಿತಂತೆ ಅರ್ಜಿ ಸಲ್ಲಿಕೆಯಾದಾರೆ ಅದನ್ನು 30 ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಇತ್ಯರ್ಥಪಡಿಸುವುದು.
  • ಆರೋಪಿಯ ಬಂಧನದ ಅವಧಿ ವಿಸ್ತರಿಸುವಂತೆ ತನಿಖಾಧಿಕಾರಿಯು ಕೋರಿದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯ ಸ್ಥಿತಿಗತಿ ಕುರಿತು ವಿಚಾರಿಸುವುದು.
  • ಯಾವುದೇ ಒಬ್ಬ ಸಾಕ್ಷಿದಾರ ನಿರ್ದಿಷ್ಟ ವಿಷಯವಾಗಿ ತನ್ನ ಹೇಳಿಕೆಯಲ್ಲಿ ಅಚಲವಾಗಿದ್ದರೆ ಹಾಗೂ ಆ ಸಾಕ್ಷ್ಯ ಸ್ಪಷ್ಟವಾಗಿದ್ದರೆ ಅದೇ ವಿಚಾರವಾಗಿ ಪುನರಾವರ್ತಿತ ಹೇಳಿಕೆಗಳನ್ನು ನೀಡುವಂತಹ ಸಾಕ್ಷಿಗಳನ್ನು ಕಡಿಮೆ ಮಾಡಬೇಕು. ತ್ವರಿತ ವಿಚಾರಣೆಯ ನಿಟ್ಟಿನಲ್ಲಿ ಈ ಅಂಶ ಪರಿಗಣಿಸಬೇಕು.
  • ಸಾರ್ವಜನಿಕ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164 (ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸುವುದು)ನ್ನು ಆಗಾಗ್ಗೆ ಬಳಕೆ ಮಾಡಬೇಕು.
  • ತನಿಖೆ ಪರಿಣಾಮಕಾರಿಯಾಗಿ ನಡೆಸಲು ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆ ತಂಡ ಹೊರತುಪಡಿಸಿ, ತನಿಖೆಗೆಂದೇ ಪ್ರತ್ಯೇಕ ವಿಭಾಗ ಸ್ಥಾಪಿಸಬೇಕು ಮತ್ತು ಅಂತಹ ಪೊಲೀಸರಿಗೆ ಎಲ್ಲ ಅಗತ್ಯ ತರಬೇತಿ ನೀಡಬೇಕು. ವಿಶೇಷವಾಗಿ ಹವಾಲಾ ಹಣ ವರ್ಗಾವಣೆ, ಭ್ರಷ್ಟಾಚಾರ ಮತ್ತು ಸೈಬರ್ ಕ್ರೈಂಗಳ ತನಿಖೆಗೆ ತಾಂತ್ರಿಕ ತರಬೇತಿ ನೀಡಬೇಕು.
  • ತನಿಖಾಧಿಕಾರಿಯು ಕಾಲಾಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೇ ಇದ್ದರೆ ಮೇಲಧಿಕಾರಿಯು ಸಿಆರ್‌ಪಿಸಿ ಸೆಕ್ಷನ್‌ 36ರ ಪ್ರಕಾರ ತಮ್ಮ ಅಧಿಕಾರ ಚಲಾಯಿಸಬಹುದು.
  • ಸೂಕ್ತ ಕಾರಣಗಳಿಲ್ಲದೇ, ತ್ವರಿತಗತಿಯಲ್ಲಿ ಅಥವಾ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೇ ಇದ್ದಾಗ ತನಿಖಾಧಿಕಾರಿ ವಿರುದ್ಧ ದುರ್ನಡತೆ ಆಧಾರದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 20ರ ಉಪಬಂಧಗಳ ಅಡಿಯಲ್ಲಿ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು.
  • 1943ರ ಪೊಲೀಸ್ ರೆಗ್ಯುಲೇಷನ್ ಬೆಂಗಾಳದ ನಿಯಮಗಳಂತೆಯೇ ರಾಜ್ಯದಲ್ಲಿಯೂ ತನಿಖೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಸೂಕ್ತ ನಿಯಮಗಳನ್ನು ರೂಪಿಸುವ ಕುರಿತಂತೆ ಸಂಬಂಧಪಟ್ಟ ಪ್ರಾಧಿಕಾರಿಗಳು ಪರಿಗಣಿಸಬಹುದು.
  • ತನಿಖೆ ಮತ್ತು ವಿಚಾರಣೆ ವಿಳಂಬವಾದಂತೆ ಸಾಕ್ಷಿಗಳಲ್ಲಿ ಆತಂಕ ಮನೆಮಾಡುವುದನ್ನು ತಪ್ಪಿಸಲು ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಅಭಿವೃದ್ಧಿಪಡಿಸುವುದು.
  • (WP 15144/2021)

Share It

You cannot copy content of this page