ತಾಂತ್ರಿಕ ಕಾರಣಗಳ ತಪ್ಪಿನಿಂದಾಗಿ ವ್ಯಕ್ತಿಯೊಬ್ಬರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ,
ಎನ್‌ಡಿಪಿಎಸ್ ಕಾಯ್ದೆ ಅಡಿ ಬಂಧಿತನಾಗಿದ್ದ ವ್ಯಕ್ತಿಗೆ ಸಂಬಂಧಿಸಿದ ಫೋರೆನ್ಸಿಕ್ ರಿಪೋರ್ಟ್ ನ ಮುದ್ರಣದಲ್ಲಿನ ದೋಷದಿಂದಾಗಿ ನೈಜೀರಿಯನ್ ಪ್ರಜೆಯನ್ನು ಬಂಧನದಲ್ಲಿ ಇಟ್ಟಿದ್ದಕ್ಕಾಗಿ ಈ ಪರಿಹಾರ ನೀಡುವಂತೆ ನ್ಯಾ. ಭಾರತಿ ಡಾಂಗ್ರೆ ಅವರಿದ್ದ ಪೀಠ ನಿರ್ದೇಶಿಸಿದೆ.
ವಿಚಾರಣೆ ವೇಳೆ ಅಧಿಕಾರಿಯ ಲೋಪದಿಂದಾಗಿ ವಿದೇಶಿ ಪ್ರಜೆಯನ್ನು ಅಕ್ರಮ ಬಂಧನದಲ್ಲಿ ಇಟ್ಟಿದ್ದಕ್ಕೆ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಇಂತಹ ಕಾನೂನು ಬಾಹಿರ ಬಂಧನಕ್ಕೆ ಪರಿಹಾರ ನೀಡಲು ಸರ್ಕಾರದ ಬಳಿ ಯಾವುದೇ ನೀತಿಯಿಲ್ಲ. ಹೀಗಾಗಿ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಮಹಾರಾಷ್ಟ್ರ ಸರ್ಕಾರದ ವಾದ ಒಪ್ಪಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಭಾತೀಯರಿಗೆ ಅಷ್ಟೇ ಅಲ್ಲ. ವಿದೇಶಿ ಪ್ರಜೆಗಳಿಗೂ ಸ್ವಾತಂತ್ರ್ಯವನ್ನು ಖಾತರಿಪಡಿಸಲಾಗಿದೆ. ಇಂತಹ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಧಿಕಾರಿಯ ಲೋಪದಿಂದಾಗಿ 2 ವರ್ಷ ಕಾಲ ಜೈಲಿನಲ್ಲಿರುವಂತಾದ ಸಂತ್ರಸ್ತ ವಿದೇಶಿ ಪ್ರಜೆಗೆ 6 ವಾರಗಳಲ್ಲಿ 2 ಲಕ್ಷ ಪರಿಹಾರ ನೀಡಬೇಕು ಹೈಕೋರ್ಟ್ ಆದೇಶಿಸಿದೆ.