ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದ 5 ವರ್ಷದ ಹೆಣ್ಣು ಮಗುವಿನ ಬಟ್ಟೆ ಬಿಚ್ಚಿ ಅವಮಾನಿಸಿದ ಶಿಕ್ಷಕಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿಕ್ಷಕಿಯ ವಿರುದ್ಧ ದಾಖಲಿಸಿರುವ ಪ್ರಕರಣವನ್ನ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಹಲಸೂರು ಪೊಲೀಸ್ ಠಾಣೆಯಲ್ಲಿ ಮಗುವಿನ ಪೋಷಕರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಶಿಕ್ಷಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಗುವಿನ ತಾಯಿ ಹಲಸೂರು ಪೊಲೀಸರಿಗೆ ದೂರು ನೀಡಿ, ತಮ್ಮ ಮಗುವಿಗೆ ಶಾಲೆಯಲ್ಲಿ ಶಿಕ್ಷಕಿ ಥಳಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಬಳಿಕ ಎಲ್ಲ ಮಕ್ಕಳ ಮುಂದೆ ಮಗುವಿನ ಪ್ಯಾಂಟ್ ಬಿಚ್ಚಿ ಅಪಮಾನಿಸಲಾಗಿದೆ. ನಂತರ ಮಗುವನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ಮೇರೆಗೆ ಪೊಲೀಸರು ಪೋಕ್ಸೊ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ 41 ವರ್ಷದ ಶಿಕ್ಷಕಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶಿಕ್ಷಕರು ಮಕ್ಕಳೊಂದಿಗೆ ವರ್ತಿಸುವಾಗ ಜಾಗರೂಕರಾಗಿರಬೇಕು. ಕೋಲು ಪಕ್ಕಕ್ಕಿಟ್ಟು ಕಲಿಸಲು ಮುಂದಾಗಬೇಕು. ಶಿಕ್ಷಕರ ಆಕ್ರಮಣಕಾರಿ ನಡವಳಿಕೆಗಳಿಂದ ಎಳೆಯ ಮನಸ್ಸುಗಳು ನಲುಗಬಾರದು. ಹಾಗಾದಲ್ಲಿ ಮಕ್ಕಳ ಮನಸ್ಸಿನ ಮೇಲೆ ಧೀರ್ಘಕಾಲೀನ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪ್ರಕರಣದಲ್ಲಿ ಶಿಕ್ಷಕಿ ಮಗುವಿನ ಪ್ಯಾಂಟ್ ನ್ನು ಎಲ್ಲ ಮಕ್ಕಳ ಮುಂದೆ ಎಳೆದು ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಗುವನ್ನು ಕತ್ತಲೆ ಕೋಣೆಯಲ್ಲಿ ಕೂಡಿಟ್ಟ ಆರೋಪವಿದೆ. ಮಗು ವಿಚಾರಣಾ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯಲ್ಲೂ ಈ ಅಂಶಗಳಿವೆ. ಯಾವುದೇ ವ್ಯಕ್ತಿಯ ತನ್ನ ದೇಹವನ್ನು ಇತರರಿಗೆ ಪ್ರದರ್ಶಿಸುವಂತೆ ಮಾಡುವುದು ಲೈಂಗಿಕ ದೌರ್ಜನ್ಯವಾಗುತ್ತದೆ. ಹೀಗಾಗಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯವೇ ನಿರ್ಧರಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಶಿಕ್ಷಕಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.