News ⓇJudgements

ಚಾರ್ಚ್ ಶೀಟ್ ಪಿಎಸ್ಐ ಸಲ್ಲಿಸಿದರೂ ಮಾನ್ಯತೆ ಇದೆ: ಹೈಕೋರ್ಟ್

Share It

ಬೆಂಗಳೂರು: ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ)ಗೂ ಇದೆ ಎಂದಿರುವ ಹೈಕೋರ್ಟ್, ಇದೇ ಆಧಾರದಲ್ಲಿ ಜಾಮೀನು ಕೋರಿದ್ದ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಎಸ್ಎಚ್ಒ ಅಲ್ಲದ ಪಿಎಸ್ಐಗೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರವಿಲ್ಲ. ಆದ್ದರಿಂದ ತಮಗೆ ಜಾಮೀನು ನೀಡಬೇಕು. ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಪ್ರಕರಣದಲ್ಲಿ ಅರ್ಜಿದಾರ ಆರೋಪಿಗಳು ತಮ್ಮ ಕುಟುಂಬ ಸದಸ್ಯರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಮರಣ ಪತ್ರದಿಂದ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕುಟುಂಬ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸಲಾಗದು. ಇನ್ನು ಪಿಎಸ್ಐ ಕೂಡ ಉಸ್ತುವಾರಿ ಎಸ್ಎಚ್ಒ ಆಗಿದ್ದು, ಅವರು ಸಲ್ಲಿಸಿದ ಚಾರ್ಜ್ ಶೀಟ್ ಕೂಡ ಮಾನ್ಯತೆ ಹೊಂದಿರುತ್ತದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ. ಆದ್ದರಿಂದ, ಅರ್ಜಿದಾರರಿಗೆ ಜಾಮೀನು ನೀಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬದ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿದ ಪಿಎಸ್‌ಐ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದನ್ನು ಪ್ರಶ್ನಿಸಿದ್ದ ಆರೋಪಿಗಳು, ಸಿಆರ್ಪಿಸಿ ಸೆಕ್ಷನ್ 173(2) ಪ್ರಕಾರ ಪೊಲೀಸ್ ಠಾಣೆಯ ಆಡಳಿತ ಹೊಂದಿರುವ ಇನ್ಸಪೆಕ್ಟರ್ ಗೆ ದೋಷಾರೋಪಪಟ್ಟಿ ಸಲ್ಲಿಸುವ ಅಧಿಕಾರವಿದೆ. ಪಿಎಸ್ಐಗೆ ದೋಷಾರೋಪ ಪಟ್ಟಿ ಸಲ್ಲಿಸಲು ಅಧಿಕಾರವಿಲ್ಲ. ಪಿಎಸ್‌ಐ ಪ್ರಕರಣದ ತನಿಖೆ ನಡೆಸಬಹುದಷ್ಟೇ. ಠಾಣೆಯ ಅಧಿಕಾರಿಯಾಗಿರುವ ಇನ್ಸ್‌ಪೆಕ್ಟರ್ ಮಾತ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ನಿಯಮ ಪಾಲಿಸಿಲ್ಲವಾದ್ದರಿಂದ ತಮಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.

ವಾದ ತಿರಸ್ಕರಿಸಿರುವ ಪೀಠ, ಪೊಲೀಸ್ ಮಾರ್ಗಸೂಚಿಯಲ್ಲಿ ಪಿಎಸ್‌ಐಗೂ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರವಿದೆ. ಪಿಎಸ್‌ಐ ಸಹ ಠಾಣೆಯ ಉಸ್ತುವಾರಿಯಾಗಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಪಿಎಸ್‌ಐ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪ ಪಟ್ಟಿ ಸಲ್ಲಿಸಲು ಪಿಎಸ್‌ಐಗೆ ಅಧಿಕಾರವಿಲ್ಲ ಅಥವಾ ಅದು ಕಾನೂನುಬಾಹಿರ ಎನ್ನಲಾಗದು ಎಂದು ಸ್ಪಷ್ಟಪಡಿಸಿದೆ.
(CRL.P 2807/2022)


Share It

You cannot copy content of this page