News

ಬೈಕ್ ಅಪಘಾತ.. 3ನೇ ಸವಾರನಿಗೂ ವಿಮೆ ಅನ್ವಯ: ಹೈಕೋರ್ಟ್

Share It

ದ್ವಿಚಕ್ರ ವಾಹನ ಸವಾರಿ ವೇಳೆ ಅಪಘಾತ ಸಂಭವಿಸಿದರೆ ವಾಹನದ ಮೇಲೆ ಕುಳಿತ ಮೂರನೇ ವ್ಯಕ್ತಿಗೂ ವಿಮೆ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಬೈಕ್ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಗೆ 8.10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಲಬುರಗಿಯ ಮೋಟರು ವಾಹನ ಅಪಘಾತ ನ್ಯಾಯಾಧಿಕರಣ ನೀಡಿದ್ದ ಆದೇಶ ಪ್ರಶ್ನಿಸಿ ಯುನೈಟೆಡ್ ಇಂಡಿಯಾ ಇನ್ಸ್ಯೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಮೊಹಮ್ಮದ್ ಸಿದ್ದಿಕಿ ವರ್ಸಸ್ ನ್ಯಾಷನಲ್ ಇನ್ಸ್ಯೂರೆನ್ಸ್ ಕಂಪನಿ ಲಿಮಿಟೆಡ್ ಪ್ರಕರಣದಲ್ಲಿ ಮೂವರು ಪ್ರಯಾಣಿಸುತ್ತಿದ್ದರೂ ವಿಮೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಮಾ ಸಂಸ್ಥೆ ಅಪಘಾತದ ವೇಳೆ ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂದು ಆರೋಪಿಸಿದೆ. ಈ ಮೂಲಕ ವಿಮೆ ಷರತ್ತು ಉಲ್ಲಂಘಿಸಲಾಗಿದೆ. ಜತೆಗೆ ಬೈಕ್ ಸವಾರ ಸರಿಯಾದ ಚಾಲನಾ ಪರವಾನಿಗೆಯನ್ನೂ ಹೊಂದಿರಲಿಲ್ಲ ಎಂದು ಆರೋಪಿಸಿದೆ.

ಆದರೆ, ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದರು ಎನ್ನಲಾಗದು. ಹೀಗಾಗಿ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ ಪರಿಹಾರ ಪಡೆಯುವುದನ್ನು ನಿರಾಕರಿಸಲಾಗದು ಎಂದಿದ್ದು, ಪರಿಹಾರ ಹಣ ವಿತರಿಸುವ ಕುರಿತು ನ್ಯಾಯಾಧಿಕರಣ ಅಗತ್ಯ ಕ್ರಮ ಜರುಗಿಸಬಹುದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2011ರ ನವೆಂಬರ್ 11ರಂದು ಕಲಬುರಗಿಯ ಚಿಂಚೋಳಿಯಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ಈ ವೇಳೆ ಹಿಂಬದಿ ಸವಾರ ಸಯ್ಯದ್ ಗೌಸ್ ತೀವ್ರವಾಗಿ ಗಾಯಗೊಂಡು ನವೆಂಬರ್ 16ರಂದು ಸಾವನ್ನಪ್ಪಿದ್ದರು. ಆ ಬಳಿಕ ಮೃತನ ಕುಟುಂಬ ಸದಸ್ಯರು ಪರಿಹಾರ ಕೋರಿ ಮೋಟರು ವಾಹನ ಕಾಯ್ದೆ-1988ರ ಸೆಕ್ಷನ್ 166 ಅಡಿ ಪರಿಹಾರ ಕೋರಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಕಲಬುರಗಿಯ ಮೋಟರು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣ 8,10,200 ರೂಪಾಯಿ ಪರಿಹಾರ ನೀಡುವಂತೆ 2012ರ ಡಿಸೆಂಬರ್ 3ರಂದು ವಿಮಾ ಸಂಸ್ಥೆಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
(MFA 30681/2013)


Share It

You cannot copy content of this page