ದೆಹಲಿ: ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಪತ್ನಿಯೇ ಪ್ರತಿವಾದಿ ಅಥವಾ ಎದುರು ಪಕ್ಷಗಾರಳು ಎಂಬುದನ್ನು ಕಕ್ಷೀದಾರನಿಗೆ ತಿಳಿಸದೆ ಹಲವು ವರ್ಷಗಳ ಕಾಲ ಕೇಸ್ ನಡೆಸಿದ್ದ ವಕೀಲರ ವಿರುದ್ಧ ಭಾರತೀಯ ವಕೀಲರ ಪರಿಷತ್ತು (Bar Council of India) ಶಿಸ್ತು ಕ್ರಮ ಜರುಗಿಸಿದ್ದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಅಪ್ಪ ರಂಜೀತ್ ಅಲಿಯಾಸ್ ರಾನು ಯಾದವ್ ಮತ್ತು ಪುತ್ರ ಅಜೀತ್ ಶಿಸ್ತು ಕ್ರಮಕ್ಕೆ ಗುರಿಯಾಗಿರುವ ವಕೀಲರು. ಕಕ್ಷೀದಾರ ಲಕ್ಷ್ಮಣ್ ಬಪ್ಪಾಜಿ ನಾಯಕ್ ಎಂಬುವರ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಇವರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು. ಆದರೆ ವ್ಯಾಜ್ಯದ ಎದುರು ವಾದಿ ತನ್ನ ಪತ್ನಿಯೇ ಎಂಬುದನ್ನು ರಂಜೀತ್ ಕಕ್ಷೀದಾರರಿಂದ ಮರೆ ಮಾಚಿದ್ದರು.
1994ರ ಕೆಲ ದಾಖಲೆಗಳೊಂದಿಗೆ ರಂಜೀತ್ ಪತ್ನಿ ಆಸ್ತಿಯ ಒಡೆತನಕ್ಕೆ ಸಂಬಂಧಿಸಿದಂತೆ ಸಿವಿಲ್ ಕೇಸ್ ದಾಖಲಿಸಿದ್ದು, ಈ ಪ್ರಕರಣದಲ್ಲಿ ಅಪ್ಪ-ಮಗ ವಕೀಲರು 2006 ರವರೆಗೂ ಕಕ್ಷೀದಾರನ ಪರ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. ಈ ವಿಚಾರ ತಿಳಿದ ನಂತರ ಕಕ್ಷೀದಾರ ಲಕ್ಷ್ಮಣ್ ಬಪ್ಪಾಜಿ ನಾಯಕ್ ವಕೀಲರಾದ ರಂಜೀತ್ ಹಾಗೂ ಅಜೀತ್ ವಿರುದ್ಧ ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಅಪ್ಪ-ಮಗ ವಕೀಲರ ವಿರುದ್ಧ ಶಿಸ್ತು ಕ್ರಮ ಜರುಗಿಸಿತ್ತು ಇದನ್ನು ಪ್ರಶ್ನಿಸಿ ಭಾರತೀಯ ವಕೀಲರ ಪರಿಷತ್ತಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಬಿಸಿಐ ಆರೋಪಿತ ವಕೀಲರ ವಿರುದ್ಧ ವಕೀಲರ ಕಾಯ್ದೆ ಸೆಕ್ಷನ್ 35ರ ಅಡಿ ಶಿಸ್ತು ಕ್ರಮ ಜರುಗಿಸಿತ್ತು. ವಕೀಲ ರಂಜೀತ್ ವೃತ್ತಿಗೆ 2 ವರ್ಷ ಕಾಲ ನಿರ್ಬಂಧ ವಿಧಿಸಿದ್ದ ಬಿಸಿಐ, ಪುತ್ರ ರಂಜೀತ್ ವರ್ಷದಿಂದೀಚೆಗೆ ವಕೀಲಿ ವೃತ್ತಿ ಆರಂಭಿಸಿದ್ದನ್ನು ಪರಿಗಣಿಸಿ ಮುಂದೆ ವೃತ್ತಿ ದುರ್ನಡತೆ (professional misconduct) ತೋರದಂತೆ ಪ್ರಮಾಣ ಪತ್ರ ಸಲ್ಲಿಸುವಂತೆ ತಾಕೀತು ಮಾಡಿತ್ತು. ಇದೇ ವೇಳೆ ಕಕ್ಷೀದಾರರಿಗೆ 50 ಸಾವಿರ ರೂ ಪರಿಹಾರವಾಗಿ ನೀಡುವಂತೆ ಮತ್ತು ವಕೀಲರ ಕಲ್ಯಾಣ ನಿಧಿಗೆ 50 ಸಾವಿರ ಪಾವತಿಸುವಂತೆ ಸೂಚಿಸಿತ್ತು.
ಈ ಆದೇಶ ಪ್ರಶ್ನಿಸಿ ಅಪ್ಪ-ಮಗ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು, ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್ ಓಕ ಹಾಗೂ ನ್ಯಾ. ಸಂಜಯ್ ಕರೋಲ್ ಅವರಿದ್ದ ಪೀಠ ಕಳೆದ ಜುಲೈ 27ರಂದು ಶಿಸ್ತು ಕ್ರಮ ಜರುಗಿಸಿದ್ದ ಬಿಸಿಐ ಆದೇಶವನ್ನು ಎತ್ತಿ ಹಿಡಿದಿದೆ. ಸುಪ್ರೀ ಕೋರ್ಟ್ ತನ್ನ ತೀರ್ಪಿನಲ್ಲಿ, ಬಿಸಿಐ ಆದೇಶದಂತೆ ವಕೀಲ ರಂಜೀತ್ 50 ಸಾವಿರ ಹಣವನ್ನು ಪರಿಹಾರ ರೂಪದಲ್ಲಿ ಈಗಾಗಲೇ ಕಕ್ಷೀದಾರ (ದೂರುದಾರ)ರಿಗೆ ಪಾವತಿಸಿದ್ದಾರೆ. ಬಾಕಿ 50 ಸಾವಿರ ಹಣವನ್ನು ವಕೀಲರ ಕಲ್ಯಾಣ ನಿಧಿಗೆ ಪಾವತಿಸಬೇಕು. ಇನ್ನು ಈಗಾಗಲೇ ತಾವು ವಕೀಲಿ ವೃತ್ತಿ ನಿಲ್ಲಿಸಿರುವುದಾಗಿ ರಂಜೀತ್ ತಿಳಿಸಿದ್ದು, ಅದರಂತೆ ತಮ್ಮ ಸನ್ನದನ್ನು ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಗೆ ಒಂದು ತಿಂಗಳಲ್ಲಿ ಒಪ್ಪಿಸಬೇಕು. ಇನ್ನು ವಕೀಲ ಅಜೀತ್ ಮುಂದೆಂದೂ ವೃತ್ತಿ ದುರ್ನಡತೆ ತೋರುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
(Civil Appeal No(s). 14083-14084/2015)