ಬೆಂಗಳೂರು: ನಟ ಸುದೀಪ್ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಎನ್ಎಂ ಸುರೇಶ್ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ನಟ ಸುದೀಪ್ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ಆರೋಪಿತ ನಿರ್ಮಾಪಕರ ವಿರುದ್ಧ ಕೇಸ್ ದಾಖಲಿಸಲು ನಿರ್ದೇಶನ ನೀಡಿದೆ. ಇದೇ ವೇಳೆ ಆರೋಪಿತರು ಆಗಸ್ಟ್ 26 ರಂದು ಕೋರ್ಟ್ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ನ್ಯಾಯಾಲಯದ ಮುಂದೆ ಪ್ರಮಾಣಿತ ಹೇಳಿಕೆ ದಾಖಲಿಸಿದ್ದರು. ತಾನು ಕಷ್ಟಪಟ್ಟು ಗಳಿಸಿದ ಗೌರವ-ವರ್ಚಸ್ಸಿಗೆ ನಿರ್ಮಾಪಕರು ಧಕ್ಕೆ ಉಂಟು ಮಾಡಿದ್ದಾರೆ. ಕೋವಿಡ್ ಸಂದರ್ಭವೂ ಸೇರಿದಂತೆ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಿದ್ದೂ ನಿರ್ಮಾಪಕರು ಹಣ ಪಡೆದು ಸಿನಿಮಾ ಮಾಡಿಲ್ಲ, ಹಣವನ್ನು ಕೂಡ ಹಿಂದಿರುಗಿಲ್ಲ ಎಂದು ಆರೋಪ ಮಾಡಿದ್ದಾರೆ. ಅವರ ಬಳಿ ಯಾವುದೇ ಹಣ-ನೆರವು ಪಡೆದಿಲ್ಲ. ನಿರ್ಮಾಪಕರ ಹೇಳಿಕೆಯಿಂದ ನನ್ನ ವರ್ಚಸ್ಸಿಗೆ ಕುಂದುಂಟಾಗಿದೆ ಎಂದು ವಿವರವಾದ ಹೇಳಿಕೆ ದಾಖಲಿಸಿದ್ದರು.
ಹಿನ್ನೆಲೆ: ಕೆಲ ದಿನಗಳ ಹಿಂದೆ ಆರೋಪಿತ ನಿರ್ಮಾಪಕರು ಪತ್ರಿಕಾಗೋಷ್ಠಿ ನಡೆಸಿ, ನಟ ಸುದೀಪ್ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿ ತಮ್ಮಿಂದ ಅಡ್ವಾನ್ಸ್ ಹಣ ಪಡೆದು ಸಿನಿಮಾದಲ್ಲೂ ನಟಿಸಿಲ್ಲ, ಹಣವನ್ನು ವಾಪಸ್ಸು ಮಾಡಿಲ್ಲ ಎಂದು ಆರೋಪಿಸಿದ್ದರು. ನಿರ್ಮಾಪಕರ ಹೇಳಿಕೆಯಿಂದ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ನಂತರ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ.