News ⓇJudgements

ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ: ಜಿಲ್ಲಾಧಿಕಾರಿಗಿಲ್ಲ ತಡೆಗಟ್ಟುವ ಅಧಿಕಾರ

Share It

ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ತಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಟ್ಟಡ ನಿರ್ಮಿಸುತ್ತಿರುವ ಜಾಗ ತಮ್ಮದು ಹಾಗೂ ಅದು ಕೃಷಿ ಭೂಮಿಯಾಗಿದ್ದು ಅಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ತಡೆಯಲು ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಲಕ್ಷಣರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ತಮಗೆ ಸೇರಿದ ಕೃಷಿ ಭೂಮಿಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗೆ ನಿರ್ದೇಶಿಸುವಂತೆ ಕೋರಿದ್ದಾರೆ. ಆದರೆ, ಅರ್ಜಿದಾರರು ಇದೇ ವಿಚಾರವಾಗಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಅಲ್ಲಿ ತಡೆಯಾಜ್ಞೆ ಕೋರಿಕೆ ತಿರಸ್ಕೃತಗೊಂಡಿದೆ. ಈ ವಿಚಾರವನ್ನು ಮುಚ್ಚಿಟ್ಟು ಜಿಲ್ಲಾಧಿಕಾರಿಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 95(2) ರ ನಿಯಮದಂತೆ ಜಿಲ್ಲಾಧಿಕಾರಿಯು ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ತಡೆಗಟ್ಟುವ ಅಧಿಕಾರ ಹೊಂದಿದ್ದು, ಅದನ್ನು ಚಲಾಯಿಸಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಆದರೆ, ಕಾಯ್ದೆಯ ಸೆಕ್ಷನ್ 95(2) ರ ಪ್ರಕಾರ, ಕೃಷಿ ಭೂಮಿಯನ್ನು ಪರಿವರ್ತಿಸಲು ಕೋರಿ ಅರ್ಜಿ ಸಲ್ಲಿಸಿದಾಗ ಅದು ಪರಿವರ್ತನೆಗೆ ಯೋಗ್ಯವೇ ಅಥವಾ ಇಲ್ಲವೇ ಎಂಬ ಕುರಿತಂತೆ ಮಾತ್ರವೇ ಜಿಲ್ಲಾಧಿಕಾರಿ ನಿರ್ಣಯ ಕೈಗೊಂಡು ಇತ್ಯರ್ಥಪಡಿಸಬಹುದು. ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಿಸುತ್ತಿರುವ ಕುರಿತಂತೆ ಕ್ರಮ ಕೈಗೊಳ್ಳಲಾಗದು. ಇನ್ನು ಪ್ರಕರಣವು ಸಿವಿಲ್ ವ್ಯಾಜ್ಯವಾಗಿದ್ದು ಇದನ್ನು ಸಿವಿಲ್ ನ್ಯಾಯಾಲಯ ನಿರ್ಣಯಿಸಬಹುದೇ ಹೊರತು ಜಿಲ್ಲಾಧಿಕಾರಿಯಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ ಅರ್ಜಿದಾರರಿಗೆ 15 ಸಾವಿರ ದಂಡ ವಿಧಿಸಿದೆ.


(WP 23665/2017)


Share It

You cannot copy content of this page