ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿ ಮಗಳು ಆಸ್ತಿಯಲ್ಲಿ ಪಾಲು ಕೇಳುವಾಗ ಅಥವಾ ಆಸ್ತಿ ವಿಭಜನೆ ಕೋರಿ ದಾವೆ ಹೂಡುವಾಗ ಮದುವೆ ವೇಳೆ ವರದಕ್ಷಿಣೆಯಾಗಿ ಪಡೆದ ಆಸ್ತಿಗಳನ್ನು ಕೂಡ ದಾವೆಯಲ್ಲಿ ಸೇರಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ 6ರ ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ಅರ್ಜಿದಾರ ಮಹಿಳೆ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ವೇಳೆ ಮಹಿಳೆಯ ಸಹೋದರ ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ ನೀಡಿದ್ದ ಜಮೀನನ್ನು ಕೂಡ ವಿಭಜನೆ ದಾವೆಯಲ್ಲಿ ಸೇರಿಸುವಂತೆ ಕೋರಿದ್ದರು. ಈ ಮನವಿಯನ್ನು ಸಿಟಿ ಸಿವಿಲ್ ಕೋರ್ಟ್ ಪರಿಗಣಿಸಿ, ಅರ್ಜಿ ಮಾರ್ಪಡಿಸುವಂತೆ ಮಹಿಳೆಗೆ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅರ್ಜಿದಾರ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಮಹಿಳೆ ಪರ ವಾದ ಮಂಡಿಸಿದ್ದ ವಕೀಲರು, ವರದಕ್ಷಿಣೆಯಾಗಿ ನೀಡಿರುವ ಆಸ್ತಿ ಎಂದು ಹೇಳಿರುವ ಆಸ್ತಿಯನ್ನು ಅರ್ಜಿದಾರರ ಮಾವ ಹಾಗೂ ಪತಿ ಅವರ ಸ್ವಂತ ಹಣದಿಂದ ಖರೀದಿಸಿದ್ದಾರೆ. ಈ ಆಸ್ತಿಯನ್ನು ವಿಭಜನೆ ದಾವೆಯಲ್ಲಿ ಸೇರಿಸಬೇಕಾಗಿಲ್ಲ. ಹೀಗಾಗಿ, ಆಸ್ತಿಯನ್ನು ದಾವೆಯಲ್ಲಿ ಸೇರಿಸುವಂತೆ ಸಿವಿಲ್ ಕೋರ್ಟ್ ನೀಡಿರುವ ಆದೇಶ ನ್ಯಾಯಸಮ್ಮತವಲ್ಲ ಎಂದಿದ್ದರು.
ಇದೇ ವೇಳೆ ಮಹಿಳೆಯ ಸಹೋದರನ ಪರ ವಕೀಲರು, ವಿಭಜನೆ ದಾವೆಯಲ್ಲಿ ಸೇರಿಸಬೇಕು ಎಂದು ಹೇಳಿರುವ ಆಸ್ತಿಯನ್ನು ಮದುವೆ ವೇಳೆ ಉಡುಗೊರೆಯಾಗಿ ನೀಡಲಾಗಿದೆ. ಹೀಗಾಗಿ ಆ ಆಸ್ತಿಯನ್ನು ದಾವೆಯಲ್ಲಿ ಸೇರಿಸಬೇಕು ಎಂದು ವಾದಿಸಿದ್ದರು.
ಹೈಕೋರ್ಟ್ ತೀರ್ಪು: ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಅರ್ಜಿದಾರರು ಆಸ್ತಿ ಪಡೆದಿದ್ದರೆ ಅದನ್ನು ಕೂಡ ಆಸ್ತಿ ವಿಭಜನೆ ಸಂದರ್ಭದಲ್ಲಿ ಒಟ್ಟು ಆಸ್ತಿಯಾಗಿ ಪರಿಗಣಿಸಬೇಕಾಗುತ್ತದೆ. ಅದರಂತೆ ಅರ್ಜಿದಾರರ ಆಸ್ತಿಯನ್ನು ಕೂಡ ವಿಭಜನೆ ದಾವೆಯಲ್ಲಿ ಪರಿಗಣಿಸಬೇಕಾಗುತ್ತದೆ. ಆದರೆ, ಆಸ್ತಿಯನ್ನು ಸ್ವಂತವಾಗಿ ಖರೀದಿಸಿದ್ದರೆ ಅದನ್ನು ವಿಭಜನೆ ದಾವೆಯಲ್ಲಿ ಪರಿಗಣಿಸುವ ಅಗತ್ಯವಿಲ್ಲ.
ಇನ್ನು, ಮಗಳು ವರದಕ್ಷಿಣೆ ರೂಪದಲ್ಲಿ ಆಸ್ತಿ ಪಡೆದಿದ್ದರೆ ಅದನ್ನು ಕೂಡ ಆಸ್ತಿ ವಿಭಜನೆಗಾಗಿ ದಾವೆ ಹೂಡುವಾಗ ನಮೂದಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ ಆಸ್ತಿ ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದೋ ಅಥವಾ ಸ್ವಂತವಾಗಿ ಖರೀದಿಸಿದ್ದೋ ಎಂಬುದನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ನಿರ್ಧರಿಸುವಂತೆ ತಿಳಿಸಿದೆ.
(WP 39982/2018)