ಬೆಂಗಳೂರು: ಮಗಳಿಗೆ ಗಿಫ್ಟ್ ಡೀಡ್ ಮೂಲಕ ನೀಡಿದ್ದ ಆಸ್ತಿಯ ವರ್ಗಾವಣೆಯನ್ನು ರದ್ದುಪಡಿಸುವಂತೆ ತಾಯಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ಹವಣೆ ಮತ್ತು ಕಲ್ಯಾಣ ಕಾಯ್ದೆ-2007ರ ಸೆಕ್ಷನ್ 23(1) ನಿಬಂಧನೆಗಳು ಕಾಯ್ದೆ ಜಾರಿಯಾದ ನಂತರ ಅನ್ವಯಸಬಹುದೇ ಹೊರತು, ಪೂರ್ವಾನ್ವಯ ಮಾಡಲಾಗದು ಎಂದಿದೆ.
ತುಮಕೂರಿನ ಮಹಿಳೆಯೊಬ್ಬರು ತಮ್ಮ ಮಗಳಿಗೆ ನೀಡಿದ್ದ ಗಿಫ್ಟ್ ಡೀಡ್ ಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಹಿನ್ನೆಲೆ: 2005ರ ಆಗಸ್ಟ್ 22ರಂದು ಅರ್ಜಿದಾರ ಮಹಿಳೆಯು ತಮ್ಮ ಪುತ್ರಿಗೆ ಕೆಲ ನಿವೇಶನಗಳನ್ನು ಗಿಫ್ಟ್ ಗೀಡ್ ಮೂಲಕ ವರ್ಗವಣೆ ಮಾಡಿದ್ದರು. ಈ ಆಸ್ತಿಯನ್ನು ಮಗಳು 2014ರ ಆಗಸ್ಟ್ 26ರಂದು ಬೆಂಗಳೂರಿನ ಗೋಪಾಲ್ ಎಂಬುವರಿಗೆ ಮಾರಾಟ ಮಾಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಅರ್ಜಿದಾರ ಮಹಿಳೆಯು ಗಿಫ್ಟ್ ಡೀಡ್ ಹಾಗೂ ಮಾರಾಟವನ್ನು ರದ್ದುಗೊಳಿಸುವಂತೆ ತುಮಕೂರಿನ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು. ಮನವಿ ಪರಿಗಣಿಸಿದ್ದ ಎಸಿ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅಡಿಯಲ್ಲಿ ಗಿಫ್ಟ್ ಡೀಡ್ ಹಾಗೂ ಮಾರಾಟವನ್ನು ರದ್ದುಪಡಿಸಿದ್ದರು.
ಆಸ್ತಿ ಖರೀದಿಸಿದ್ದ ಗೋಪಾಲ್ ಅವರು ಎಸಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಪ್ರಕರಣವನ್ನು 6 ತಿಂಗಳಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಸಿವಿಲ್ ಕೋರ್ಟ್ ಗೆ ನಿರ್ದೇಶಿಸಿತ್ತು. ಜತೆಗೆ ಎಸಿ ಆದೇಶವನ್ನು ರದ್ದುಪಡಿಸಿತ್ತು. ಅದರಂತೆ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದ ಕಮಲಮ್ಮ, ಎಸಿ ಆದೇಶ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು: ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ಹವಣೆ ಮತ್ತು ಕಲ್ಯಾಣ ಕಾಯ್ದೆಯು 2007ರಲ್ಲಿ ಜಾರಿಗೆ ಬಂದಿದೆ. ಆದರೆ, ಅರ್ಜಿದಾರ ಮಹಿಳೆ ತಮ್ಮ ಸ್ಥಿರಾಸ್ತಿಯನ್ನು 2005ರಲ್ಲಿ ಮಗಳಿಗೆ ಗಿಫ್ಟ್ ಡೀಡ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಕಾಯ್ದೆಯ ಸೆಕ್ಷನ್ 23(1)ರ ನಿಬಂಧನೆಗಳು ಕಾಯ್ದೆ ಜಾರಿಗೆ ಬಂದ ವರ್ಷ 2007ರ ನಂತರದ ಪ್ರಕರಣಗಳಿಗೆ ಅನ್ವಯಿಸುತ್ತದಯೇ ಹೊರತು ಅದಕ್ಕಿಂತ ಮುಂಚಿನ ವ್ಯವಹಾರಗಳಿಗೆ ಅಲ್ಲ.
ಕಾಯ್ದೆಯ ನಿಬಂಧನೆಗಳನ್ನು ಪೂರ್ವಾನ್ವಯಗೊಳಿಸಲು ಸಾಧ್ಯವಿಲ್ಲ. ಅರ್ಜಿದಾರ ಮಹಿಳೆಯ ಮನವಿ ಮೇರೆಗೆ ಗಿಫ್ಟ್ ಡೀಡ್ ಮತ್ತು ಮಾರಾಟವನ್ನು ರದ್ದುಪಡಿಸಿರುವ ಉಪವಿಭಾಗಾಧಿಕಾರಿಯ ಆದೇಶವನ್ನು ಅಸಿಂಧುಗೊಳಿಸಿರುವ ಏಕಸದಸ್ಯ ಪೀಠದ ತೀರ್ಪು ಸರಿಯಾಗಿದೆ. ಇದರಲ್ಲಿ ಮಧ್ಯಪ್ರವೇಶಿಸುವ ಯಾವ ಅಂಶಗಳೂ ನಮಗೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿದೆ.
(WA 1170/2021)